ಶಿವಮೊಗ್ಗ, ನ.28: ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಹಸುವೊಂದು ನುಂಗಿದ್ದು, ಬಳಿಕ ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಬಂಗಾರದ ಸರವನ್ನು ಹೊರ ತೆಗೆದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ನಡೆದಿದೆ.
ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಹಸು ಬಂಗಾರದ ಸರವನ್ನು ನುಂಗಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ಗೋಪೂಜೆ ವೇಳೆ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ನಂತರ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂಬುದನ್ನು ಕುಟುಂಬಸ್ಥರು ಖಚಿತಪಡಿಸಿಕೊಂಡಿದ್ದಾರೆ.
ಬಂಗಾರದ ಸರ ಹೋದರೆ ಹೋಗಲಿ ಎಂದು ಕುಟುಂಬಸ್ಥರು ಮೊದಲಿಗೆ ಸುಮ್ಮನಿದ್ದರು. ಆದರೆ ಬಳಿಕ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿ ಅಸ್ವಸ್ಥಗೊಳ್ಳುತ್ತಿದ್ದುದು ಗಮನಕ್ಕೆ ಬಂದಿತ್ತು. ನಂತರ ಹಸುವಿನ ಪ್ರಾಣಕ್ಕೆ ಕುತ್ತಾಗಬಹುದು ಎಂಬ ಆತಂಕದಿಂದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಪಶು ವೈದ್ಯ ಡಾ. ಆನಂದ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಹಸುವಿನ ದೇಹದಿಂದ ಸರ ಹೊರ ತೆಗೆದಿದ್ದಾರೆ. ಸದ್ಯ ಹಸು ಈಗ ಆರೋಗ್ಯವಾಗಿದೆ.