ಉಡುಪಿ : ಶ್ರೀಕೃಷ್ಣಮಠದಲ್ಲಿ ಕೃಷ್ಣಾಪುರ ಸ್ವಾಮಿಗಳ ಪರ್ಯಾಯ ನಡೆಯುತ್ತಿದೆ. ಮುಂದಿನ ಸರದಿಯಲ್ಲಿ ಪುತ್ತಿಗೆ ಮಠಾಧೀಶರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಅನ್ನಬ್ರಹ್ಮ ಎಂದು ಕರೆಯುವ ಉಡುಪಿ ಕೃಷ್ಣ ದೇವರ ಪರ್ಯಾಯ ಮಹೋತ್ಸವಕ್ಕೆ ಮುನ್ನ ವಿವಿಧ ಮುಹೂರ್ತಗಳು ನಡೆಯುತ್ತವೆ. ಇದೀಗ ಮಹತ್ವದ ಎರಡು ವರ್ಷದ ಅನ್ನಬ್ರಹ್ಮನ ಯಜ್ಞಕ್ಕೆ ಧಾನ್ಯ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ.
ಉಡುಪಿ ಪರ್ಯಾಯ ಮಹೋತ್ಸವಕ್ಕೆ 800 ವರ್ಷಗಳ ಇತಿಹಾಸ ಇದೆ. ಮುಂದಿನ ಜನವರಿ 18 ರಂದು ಪುತ್ತಿಗೆ ಸ್ವಾಮಿಗಳು ಕೃಷ್ಣಾಪುರ ಸ್ವಾಮಿಗಳಿಂದ ಪೂಜಾಧಿಕಾರ ಪಡೆಯಲಿದ್ದಾರೆ. ಅದಕ್ಕೂ ಮುನ್ನ ನಡೆಯುವ ಧಾನ್ಯ ಮೂಹರ್ತ ಬುಧವಾರ ಸಂಪನ್ನಗೊಂಡಿದೆ. ಅನ್ನಬ್ರಹ್ಮನ ಕ್ಷೇತ್ರದಲ್ಲಿ ಪರ್ಯಾಯ ಪೀಠಾಧೀಶರು ಎರಡು ವರ್ಷ ಅನ್ನ ಪ್ರಸಾದ ವಿತರಣೆಯ ಸಂಕಲ್ಪ ಮಾಡಿದ್ದಾರೆ. ಪರ್ಯಾಯ ಸಂದರ್ಭಕ್ಕೆ ಬಳಸಲು ಧಾನ್ಯ, ಭತ್ತ ಸಂಗ್ರಹ ಮಾಡುವ ಮಹೂರ್ತ ಮಠದಲ್ಲಿ ನೆರವೇರಿತು.
ಧಾನ್ಯ, ಭತ್ತ ತುಂಬಿದ ಮುಡಿಗಳನ್ನು ಪಲ್ಲಕ್ಕಿಯಲ್ಲಿಟ್ಟು, ತಲೆಮೇಲೆ ಹೊತ್ತು ಮೆರವಣಿಗೆ ಮಾಡಲಾಯಿತು. ಚಂದ್ರಮೌಳೇಶ್ವರ, ಅನಂತೇಶ್ವರ ದೇವಸ್ಥಾನ, ಕೃಷ್ಣಮಠದಲ್ಲಿ ವಿಶೇಷ ಪೂಜೆಯನ್ನು ಭತ್ತದ ಮುಡಿಗಳಿಗೆ ಪೂಜೆ ಸಲ್ಲಿಕೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಮುಂದಿನ ಪುತ್ತಿಗೆ ಪರ್ಯಾಯದಲ್ಲಿ ಒಂದು ಕೋಟಿ ಪುಸ್ತಕದಲ್ಲಿ ಭಗವದ್ಗೀತೆ ಬರೆಸುವ ಯಜ್ಞವನ್ನು ಮಾಡಲಾಗುತ್ತದೆ ಎಂದು ಭಾವೀ ಪರ್ಯಾಯ ಶ್ರೀಗಳು ಹೇಳಿದ್ದಾರೆ.
ಪರ್ಯಾಯ ಪೂರ್ವಭಾವಿಯಾಗಿ 4 ಮಹೂರ್ತಗಳು
ಪರ್ಯಾಯ ಪೂರ್ವಭಾವಿಯಾಗಿ 4 ಮಹೂರ್ತಗಳು ನೆರವೇರುತ್ತವೆ. ವರ್ಷದ ಹಿಂದೆ ಬಾಳೆ ಮುಹೂರ್ತ, ಕ್ಷೇತ್ರದಲ್ಲಿ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವ ಇದೆ. ದಾಸೋಹಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸುವ ಉದ್ದೇಶದಿಂದ ತಿಂಗಳ ಹಿಂದೆ ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿತ್ತು. ಅಕ್ಕಿ ಮಹೂರ್ತದ ಮೂಲಕ ಮಠದಲ್ಲಿ ಅಕ್ಕಿ ಸಂಗ್ರಹ ಈಗಾಗಲೇ ನಡೆಯುತ್ತಿದೆ. ಇಂದು ಧಾನ್ಯ, ಭತ್ತ ಮೂಹರ್ತದ ಮೂಲಕ ಬಡಗು ಮಾಳಿಗೆಯಲ್ಲಿ ಭತ್ತದ ಮುಡಿಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಇಂದಿನಿಂದ ಭತ್ತ ಸಂಗ್ರಹ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧಾನ್ಯ ಸಂಗ್ರಹಕ್ಕೆ ಚಾಲನೆ ನೀಡಿದರು. ನವಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಪುತ್ತಿಗೆ ಸ್ವಾಮೀಜಿ ಲೋಕ ಸಂಚಾರಕ್ಕೆ ಹೊರಡಲಿದ್ದು, ಜನವರಿ ಮೊದಲ ವಾರದಲ್ಲಿ ಉಡುಪಿಗೆ ವಾಪಾಸ್ಸಾಗಲಿದ್ದಾರೆ. ವಿದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಮಠದ ಶಾಖೆಗಳಿದ್ದು, ಈ ಬಾರಿಯ ಪರ್ಯಾಯಕ್ಕೆ ವಿದೇಶಿ ಭಕ್ತರು ಆಗಮಿಸಲಿದ್ದಾರೆ. ಈ ಮೂಲಕ ಪುತ್ತಿಗೆ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದೆ.