Sunday, September 8, 2024
Homeಸುದ್ದಿರಾಷ್ಟ್ರೀಯಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

ನವದೆಹಲಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳು ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್‌ ಲ್ಯಾಬ್ ವರದಿ ತಿಳಿಸಿದೆ.

ಜಠರದಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಆಹಾರವನ್ನು ಜೀರ್ಣಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸತ್ತದೆ. ಅಲ್ಲದೇ ಇದನ್ನು ಉತ್ತಮ ಬ್ಯಾಕ್ಟೀರಿಯಾ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಪ್ಯಾಕಿಂಗ್ ಆಹಾರಗಳನ್ನು ಸೇವಿಸುವುದರಿಂದ ಈ ಆಹಾರ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ದೇಹದಿಂದ ಹೊರ ಹಾಕುತ್ತದೆ ಎಂದು ದೆಹಲಿ ಏಮ್ಸ್ ವೈದ್ಯರು ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆಹಾರವನ್ನು ಜೀರ್ಣಿಸಿಕೊಳ್ಳುವುದು ಮತ್ತು ಅದರಿಂದ ಪೋಷಕಾಂಶಗಳನ್ನು ಹೊರತೆಗೆದು ದೇಹದ ವಿವಿಧ ಭಾಗಗಳಿಗೆ ತಲುಪಿಸುವುದು ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೆಲಸವಾಗಿದೆ. ಸಂಸ್ಕರಿಸಿದ ಆಹಾರದಲ್ಲಿ ಇರುವ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಸಕ್ಕರೆ ಈ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಂತಹ ಸಂದರ್ಭಗಳಲ್ಲಿ ಪೌಷ್ಠಿಕ ಆಹಾರ ಸೇವಿಸಿದರೂ ದೇಹಕ್ಕೆ ಸರಿಯಾದ ಪೋಷಣೆ ಸಿಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಮೊದಲಿಗೆ ದೇಹದಲ್ಲಿ ಊತವಿರುತ್ತದೆ. ಬಳಿಕ ಕ್ರಮೇಣ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡ, ಶ್ವಾಸಕೋಶದ ಸೋಂಕು, ಕ್ಯಾನ್ಸರ್, ನರಸಂಬಂಧಿ ಸಮಸ್ಯೆಗಳು ಅಲ್ಲದೇ ಬೇರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ದೇಹದಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳು ದೇಹವನ್ನು ಆರೋಗ್ಯಕರವಾಗಿಡಲು ಮಾತ್ರವಲ್ಲದೇ ಅದರ ಸಹಾಯದಿಂದ ಬೊಜ್ಜು, ಅಲರ್ಜಿಯಂತಹ ಇತರ ಸಮಸ್ಯೆಗಳನ್ನು ಸಹ ತಡೆಯಬಹುದು. ಇದರ ಹೊರತಾಗಿ ಇದು ನೇರವಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸಂಭವಿಸುವ ಅನೇಕ ರೀತಿಯ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಮೊಮೊಸ್, ನೂಡಲ್ಸ್, ಫ್ರೈಡ್ ರೈಸ್‍ನಂತಹ ಮೊದಲೇ ತಯಾರಿಸಿದ ಆಹಾರವನ್ನು ಸೇವಿಸಬಾರದು. ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಮೊಸರು, ಹಾಲಿನಂತಹ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದರ ಹೊರತಾಗಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಅನೇಕ ರೀತಿಯ ಔಷಧಿಗಳು ಮತ್ತು ಇತರ ವಸ್ತುಗಳು ಸಹ ಲಭ್ಯವಿದೆ. ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಕೊರತೆಯಿಂದ ದೇಹಕ್ಕೆ ಆಗುವ ಹಾನಿಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News