ಬರವಣಿಗೆ ನ್ಯೂಸ್: ಸಿನಿಮಾ ಮೂಲಕ ಮನರಂಜನೆ ಕೊಡುತ್ತಾ ಬಂದಿದ್ದ ರಿಷಬ್ ಶೆಟ್ಟಿ ಹಾಗೂ ತಂಡ ಕರಾವಳಿಯ ಅತಿ ಸೂಕ್ಷ್ಮ ವಿಷಯವನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಒಂದು ಮೆಚ್ಚುಗೆ ಕೊಡಲೇಬೇಕು, ಹೊಂಬಾಳೆ ಬ್ಯಾನರ್ ನಲ್ಲಿ ಈ ವರ್ಷ ಬಂದಿರುವ ಅತಿ ದೊಡ್ಡ ಸಿನೆಮಾಗಳಲ್ಲಿ ಕಾಂತಾರ ಕೂಡ ಒಂದು.
ದೈವ ಪಾತ್ರಿಯ ರೂಪದಲ್ಲಿ ಮೊದಲಿಗೆ ಕಾಣಿಸಿಕೊಂಡು ಮರೆಯಾಗುವ ರಿಷಬ್ ತನ್ನ ಅದ್ಭುತ ನಟನೆಯಿಂದ ಮನಸೆಳೆಯುತ್ತಾರೆ, ತುಳು ಚಿತ್ರ ರಂಗದ ಪ್ರಮುಖರು ಮನಸ್ಸಿಗೆ ಮುದ ನೀಡುತ್ತಾರೆ. ಹಿಂದಿಯ FAMILY MAN ನಲ್ಲಿ ನೀವು ಮಿಸ್ ಮಾಡಿಕೊಂಡ ಅದೇ ಕಿಶೋರ್ ಹುಲಿ ಇಲ್ಲೂ ಘರ್ಜಿಸಿದೆ .
4 ಕಾಲಘಟ್ಟದಲ್ಲಿ ನಡೆಯುವ ಕಥೆಯಲ್ಲಿ ಕರಾವಳಿಯ ಪ್ರತ್ಯಕ್ಷ ದೈವ ಪಂಜುರ್ಲಿ ಹಾಗೂ ಗುಳಿಗ ದೈವಗಳ ಅಪೂರ್ವ ಸಂಗಮವಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದು, ಹಣದ ಹೊಳೆಯನ್ನೇ ಹರಿಸಿದ್ದಾರೆ, ಹಾಡುಗಳು ಮನಸೂರೆಗೊಳ್ಳುತ್ತವೆ , ಎರಡು – ಮೂರು ಬಾರಿ ಎದೆ ಜಲ್ಲೆನಿಸಿದರೂ, ಬೆಂಕಿಯ ಜೊತೆ ಆಟವಾಡಿರುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲಾ ಭಾಷೆಯವರು ನೋಡಲೇಬೇಕಾದ ಸಿನಿಮಾದಲ್ಲಿ ದೋಷ ಹುಡುಕುವುದೆಂದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ. ರಿಷಬ್ ಶೆಟ್ಟಿಯವರ ಈ ಚಲನಚಿತ್ರ, ಕರಾವಳಿಯ ಜನರಿಗೊಂದು ಮರೆಯಲಾಗದ ಕೊಡುಗೆ . ತುಳು ಬಳಕೆ ಸಮಂಜಸವಾಗಿ ಮಾಡಿದ್ದಾರೆ. ಕ್ಲೈಮಾಕ್ಸ್ ಒಂದೆರಡು ದಿನ ನಿಮ್ಮನ್ನು ಭ್ರಮಾಲೋಕದಲ್ಲಿ ಹಿಡಿದಿಡುತ್ತದೆ. ಕಂಬಳ, ಭೂತಕೋಲದ ಪರಿಚಯದ ಯತ್ನ ಬಹುತೇಕ ಯಶಸ್ವಿಯಾಗಿದೆ .
ಒಂದೊಂದು ಪಾತ್ರಗಳು, ಒಂದೊಂದು ರೀತಿಯ ಅನುಭವ ನೀಡುತ್ತದೆ. ಎಲ್ಲೂ ಉತ್ಪ್ರೇಕ್ಷೆಯಿಲ್ಲ , ಕಥೆ ಪರಿಧಿ ದಾಟಿಲ್ಲ , ನೈಜತೆಗೆ ಹತ್ತಿರವಾದ ಸಿನೆಮಾ .
ರೇಟಿಂಗ್ 4.7/5🌟