ಕೋಟ: ಲಂಚ ಪಡೆದ ಪ್ರಕರಣ- ಪೊಲೀಸ್ ಠಾಣಾ ಉಪನಿರೀಕ್ಷಕ ಅಮಾನತು

ಕೋಟ, ಡಿ 11: ಪೊಲೀಸ್ ಠಾಣಾ ಉಪನಿರೀಕ್ಷಕರೋರ್ವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ|ಅರುಣ್‌ ಕುಮಾರ್‌ ಅಮಾನತುಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್‌.ಪಿ. ಡಾ| ಅರುಣ್‌ ಕುಮಾರ್‌ ಅವರು ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಅಮಾನತುಗೊಳಿಸಲಾಗಿದೆ.

ಕಾಲೇಜೊಂದರ ಆಡಳಿತ ಮಂಡಳಿಯ ಗಲಾಟೆಗೆ ಸಂಬಂಧಿಸಿದಂತೆ ದೂರು ದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು.
ಬಳಿಕ ಈ ಬಗ್ಗೆ ತನಿಖೆಯನ್ನು ನಡೆಸಲಾಗಿದ್ದು, ಇದೀಗ ಅಮಾನತುಗೊಳಿಸಲಾಗಿದೆ ಎಂದರು.

ಅಚ್ಲಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್‌ ಮತ್ತು ಮಹಿಮಾ ಮಧು ಭಾಸ್ಕರ್‌ ಎಂಬುವವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು.

ಘಟನೆಯ ಕುರಿತಂತೆ ಮಧು ಭಾಸ್ಕರ್‌ ವಿರುದ್ಧ ದೂರು ದಾಖಲಿಸುವಂತೆ ಹಾಗೂ ಮಹಿಮಾ ವಿರುದ್ಧದ ದೂರಿಗೆ ಬಿ.ರಿಪೋರ್ಟ್‌ ನೀಡುವಂತೆ ಆಗ ಕೋಟ ಠಾಣಾ ಉಪನಿರೀಕ್ಷಕರಾಗಿದ್ದ ಶಂಭು ಲಿಂಗಯ್ಯ ಅವರು ಲಂಚವನ್ನು ತೆಗೆದುಕೊಂಡಿದ್ದರು.ಜೊತೆಗೆ ಅವರ ಹತ್ತಿರದ ಸಂಬಂಧಿಕರೊಬ್ಬರ ಖಾತೆಗೆ ಸ್ವಲ್ಪ ಹಣವನ್ನು ಜಮಾ ಮಾಡಿಸಿಕೊಂಡಿದ್ದರು.

ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್‌ ಗಾಣಿಗ ಕೋಟ ವೀಡಿಯೋ ಮೂಲಕ ಎಸ್‌.ಪಿ. ಅವರನ್ನು ವಿನಂತಿಸಿದ್ದರು.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿತ್ತು. ಇನ್ನು ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Scroll to Top