ರಾತ್ರಿ ಯಕ್ಷಗಾನಕ್ಕೆ ಹೈಕೋರ್ಟ್ ಅನುಮತಿ : ಕಟೀಲಿನಲ್ಲಿ ಸಂಭ್ರಮ

ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳು ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡುವುದಕ್ಕೆ ಇದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿರುವುದು ಯಕ್ಷಗಾನ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಕಟೀಲು ದೇಗುಲದ ಯಕ್ಷಗಾನ ಮೇಳಗಳ ಪ್ರದರ್ಶನವು ಮುಂದೆಯೂ ಕಾಲಮಿತಿಯಲ್ಲೇ ಮುಂದುವರಿಯಲಿದೆ ಎನ್ನಲಾಗಿದೆ.

ರಾತ್ರಿಯಿಂದ ಬೆಳಗಿನ ಜಾವದವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಇರುವ ನಿರ್ಬಂಧ ಪ್ರಶ್ನಿಸಿ ಬೆಂಗಳೂರಿನ ಭಕ್ತ ಹಾಗೂ ದೇವಸ್ಥಾನದ ಭಕ್ತರಾದ ಕೃಷ್ಣ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ನಿರ್ಬಂಧ ತೆರವುಗೊಳಿಸಿ ಇತ್ತೀಚೆಗೆ ಆದೇಶ ನೀಡಿತ್ತು.

2022 ರ ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಯಕ್ಷಗಾನ ಮೇಳಗಳಿಗೆ ಸಮಯ ನಿರ್ಬಂಧವನ್ನು ವಿಧಿಸಿ, ಸಂಜೆ 5 ರಿಂದ 12.30 ರವರೆಗೆ ಮಾತ್ರ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಗಳು ‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, 2000’ ರ ಅಡಿಯಲ್ಲಿ ಅನುಮತಿಸಿರುವ ಡೆಸಿಬಲ್ ಮಟ್ಟವನ್ನು ಮೀರುತ್ತದೆ ಎಂಬ ಆತಂಕಗಳು ಇದ್ದ ಕಾರಣ, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಆಧಾರದ ಮೇಲೆ ನಿರ್ಬಂಧ ಹೇರಲಾಗಿತ್ತು.

ಯಕ್ಷಗಾನವನ್ನು ಹಿಂದಿನಿಂದಲೂ ರಾತ್ರಿಯಿಂದ ಮುಂಜಾನೆಯವರೆಗೆ ಪ್ರದರ್ಶಿಸುತ್ತಾ ಬರಲಾಗಿದೆ. ಕೋವಿಡ್ ನಿರ್ಬಂಧಗಳ ಸಂದರ್ಭದಲ್ಲಿ ಇತ್ತೀಚಿನ ನಿರ್ಬಂಧಗಳು ಹೇರಿಕೆಯಾದವು ಎಂದು ಕೃಷ್ಣ ಕುಮಾರ್ ಅವರು ಅರ್ಜಿಯಲ್ಲಿ ವಾದ ಮಂಡಿಸಿದ್ದರು. ಶತಮಾನಗಳಷ್ಟು ಹಳೆಯದಾದ ಆಚರಣೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಅವರು ಒತ್ತಿಹೇಳಿದ್ದರು.

ಮತ್ತೊಂದೆಡೆ, ಯಕ್ಷಗಾನ ಪ್ರದರ್ಶನಗಳನ್ನು ಮುಂಜಾನೆವರೆಗೆ ವಿಸ್ತರಿಸಲು ವಿಚಾರಣೆ ವೇಳೆ ಸರ್ಕಾರಿ ವಕೀಲರು ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಲಿಲ್ಲ, ಆದರೆ ನಿಗದಿತ ಶಬ್ದ ಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪ್ರತಿಪಾದಿಸಿದ್ದರು.

Scroll to Top