ಉಡುಪಿ: ‘ಮೆಡಿಕಲ್ ಶಾಪ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ’ – ಜಿಲ್ಲಾಧಿಕಾರಿ

ಉಡುಪಿ, ಡಿ 12: ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ಕಲಂ 133 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ “X” ಮತ್ತು “H” ಔಷಧಿಗಳನ್ನು ಮಾರಾಟ ಮಾಡುವ ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಸಿ.ಸಿ.ಟಿವಿ ಕ್ಯಾಮೆರಾವನ್ನು ಅಳವಡಿಸಲು ಎಲ್ಲಾ ವೈದ್ಯಕೀಯ, ಫಾರ್ಮಸಿ ಅಂಗಡಿ ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜಿಲ್ಲಾ ಔಷಧ ನಿಯಂತ್ರಕರು ಸದ್ರಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಅಳವಡಿಸಿರುವ ಕುರಿತು ತಪಾಸಣೆ ನಡೆಸಬೇಕು.

ಈ ಆದೇಶವನ್ನು ಉಲ್ಲಂಘಿಸುವ ಮೆಡಿಕಲ್, ಫಾರ್ಮಸಿ ಅಂಗಡಿ ಮಾಲೀಕರ ವಿರುದ್ದ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Scroll to Top