ಉದ್ಯಾವರ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಉಡುಪಿ : ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಉದ್ಯಾವರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.


ಮೃತರನ್ನು ನಗರದ ಕೋರ್ಟ್ ಬಳಿಯ ನಿವಾಸಿ ರವೀಂದ್ರ ಭಟ್(55) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪಾರ್ಸೆಲ್ ತೆಗೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದವರು ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ಅಲ್ಲಿಂದ ತನ್ನ ಸ್ಕೂಟರ್‌ನಲ್ಲಿ ಉದ್ಯಾವರ ಸೇತುವೆ ಬಳಿ ತೆರಳಿದ ಅವರು, ಸೇತುವೆಯಲ್ಲಿಯೇ ಸ್ಕೂಟರ್ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ದೋಣಿ ಮೂಲಕ ಹುಡುಕಾಟ ನಡೆಸಿದರು. ಸಂಜೆ ವೇಳೆ ಅವರ ಮೃತದೇಹವು ಅಂಕುದ್ರು ಬಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇವರು ಕಳೆದ 10 ವರ್ಷಗಳಿಂದ ಉಡುಪಿಯ ಪೈ ಇಂಟರ್‌ನ್ಯಾಶನಲ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

You cannot copy content from Baravanige News

Scroll to Top