ಪ್ರವಾಸಿಗರೆ ನೀವೇನಾದ್ರೂ ಮೀನು ಪ್ರಿಯರಾಗಿದ್ರೆ ಎಚ್ಚರ.. ಎಚ್ಚರ! ಬೀಚ್ಗೆ ಹೋಗಿ ಮೀನು ಸವಿಯುವ ಪ್ಲಾನ್ ಏನಾದ್ರೂ ಇದ್ರೆ ನಿಮ್ಮ ಆರೋಗ್ಯದ ಕಡೆ ಗಮನ ಇರಲಿ. ಅರೆ ಬೀಚ್ಗೂ ಮೀನಿಗೂ ನಮ್ಮ ಆರೋಗ್ಯಕ್ಕೂ ಏನು ಸಂಬಂಧ?.
ಆಹಾ ಕೆಂಪು ಮಸಾಲೆ ತುಂಬಿಕೊಂಡು ಮಾಂಸ ಪ್ರಿಯರ ಬಾಯಲ್ಲಿ ನೀರೂರಿಸುತ್ತಿರುವ ತರಹೇವಾರಿ ಮೀನುಗಳು. ಚಾಟ್ಸ್ ಪ್ರಿಯರಿಗಾಗಿ ಕಾಯ್ತಿರೋ ರುಚಿ ರುಚಿಯಾದ ಗೋಬಿ ಮಂಚುರಿ. ನೋಡ್ತಿದ್ರೆ ಬಾಯಲ್ಲಿ ನೀರೂರಿಸುತ್ತಿರುವ ಫಿಂಗರ್ ಚಿಪ್ಸ್.. ಬಗೆ ಬಗೆಯ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿಂತಿರುವ ಜನರು. ನೀವೆನ್ರಿ ಬೆಳ್ಳಂ ಬೆಳಗ್ಗೆ ಈ ರೀತಿ ಬಾಯಲ್ಲಿ ನೀರೂರಿಸುವಂತೆ ರುಚಿ ರುಚಿಯಾದ ಖಾದ್ಯಗಳ ಬಗ್ಗೆ ಹೇಳುತ್ತಿದ್ದೀರಾ ಅಂತ ಮನಸ್ಸಲ್ಲೇ ಮಂಡಿಗೆ ತಿನ್ಬೇಡಿ.. ಯಾಕಂದ್ರೆ ಈ ಸುದ್ದಿ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ.
ಸಾಲು ಸಾಲು ರಜೆ, ವೀಕೆಂಡ್ ಮೂಡ್ ಅಂತ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಅದರಲ್ಲೂ ಶಾಲಾ ಮಕ್ಕಳು ಕೃಷ್ಣನಗರಿ ಉಡುಪಿಗೆ ಆಗಮಿಸುತ್ತಿದ್ದಾರೆ. ಹೀಗೆ ಆಗಮಿಸುವವರ ನೆಚ್ಚಿನ ತಾಣ ಅಂದ್ರೆ ಮಲ್ಪೆ ಬೀಚ್.. ಇಲ್ಲಿ ಬರುವ ಬಹುತೇಕರು ನಾನ್ ವೆಜ್ ಪ್ರಿಯರು, ಅದರಲ್ಲೂ ಮೀನಂದ್ರೆ ಬಾಯಿ ಚಪ್ಪರಿಸಿ ತಿಂತಾರೆ. ಇವರಿಗಾಗಿಯೇ ವ್ಯಾಪಾರಸ್ಥರು ಲಾಭದ ಲೆಕ್ಕಾಚಾರದಲ್ಲಿ ಬೀಚ್ ಬಳಿಯೇ ಫಿಶ್ ಲ್ಯಾಂಡ್, ಮೀನ್ ಲಂಚ್ ರೀತಿ ನಾನಾ ನಾನ್ ವೆಜ್ ಆಹಾರ ಮಳಿಗೆಗಳನ್ನ ಹಾಕಿದ್ದಾರೆ. ಇಲ್ಲಿ ಪ್ರವಾಸಿಗರನ್ನು ಸೆಳೆಯಲೆಂದೇ ಕಣ್ಣು ಕುಕ್ಕುವಂತೆ ಮೀನಿಗೆ ಕಡುಕೆಂಪು ಬಣ್ಣದ ಮಸಾಲೆ ಹಚ್ಚಿ ಹೊರಗೆ ಸಾಲಾಗಿ ಇಡಲಾಗಿದೆ. ಆದ್ರೆ ಹೀಗೆ ಮಸಾಲೆ ಹಚ್ಚಿ ಇಡಲಾದ ಮೀನುಗಳನ್ನು ಬಾಯಿ ಚಪ್ಪರಿಸಿ ತಿಂದ್ರೆ ಕ್ಯಾನ್ಸರ್ ಬರಬಹುದು ಎಚ್ಚರ. ಯಾಕಂದ್ರೆ ಅದರಲ್ಲಿರುವ ರಾಸಾಯನಿಕ ಹಾಗೂ ಮಿತಿ ಮೀರಿದ ಟೇಸ್ಟಿಂಗ್ ಪೌಡರ್.
ಅಂದಾಗೆ ಇಲ್ಲಿರುವ ಮೀನಷ್ಟೇ ಅಲ್ಲದೆ ಚಿಕನ್ ಕಬಾಬ್, ಗೋಬಿ ಮಂಚೂರಿ, ಫಿಂಗರ್ ಚಿಪ್ಸ್ ಹೀಗೆ ಕರಿದ ಆಹಾರ ತಿನಿಸು ಸಖತ್ ಡೇಂಜರ್ ಅನ್ನೋದು ಕನ್ ಫರ್ಮ್ ಆಗಿದೆ. ದೂರಿನ ಮೇರೆಗೆ ಬೀಚ್ ಸಮೀಪ ಇರುವ ಸುಮಾರು 28 ಆಹಾರ ಮಳಿಗೆಗಳ ಮೇಲೆ ದಾಳಿ ಮಾಡಿ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಈ ವೇಳೆ ಬರೋಬ್ಬರಿ 6.5 ಕೆಜಿ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅಷ್ಟೇ ಅಲ್ಲ ರಾಸಾಯನಿಕ ಬಣ್ಣಗಳು ಪತ್ತೆಯಾಗಿವೆ. ಈ ಪ್ರಮಾಣದ ಟೇಸ್ಟಿಂಗ್ ಪೌಡರ್ ಕಂಡು ಪೌರಾಯುಕ್ತರೇ ಶಾಕ್ ಆಗಿದ್ದಾರೆ. ಹೀಗೆ ಸಿಕ್ಕಿರುವ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಸೀಜ್ ಮಾಡಿ ವ್ಯಾಪಾರಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಮಾತ್ರವಲ್ಲದೆ ನಿತ್ಯ ತಪಾಸಣೆ ಮಾಡುವುದಾಗಿ ಪೌರಾಯುಕ್ತ ಹೇಳಿದ್ದಾರೆ.
ಹೆಚ್ಚಿನ ಪ್ರಮಾಣದ ರಾಸಾಯನಿಕ, ಟೇಸ್ಟಿಂಗ್ ಪೌಡರ್ ಬಳಸಿ ಪ್ರವಾಸಿಗರ ಪ್ರಾಣದ ಜೊತೆ ವ್ಯಾಪಾರಸ್ಥರು ಆಟವಾಡುತ್ತಿದ್ದಾರೆ. ಇಂತ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಬುದ್ಧಿವಾದ ಹೇಳಿದ್ರೆ ಯಾವ ಬದಲಾವಣೆ ಸಾಧ್ಯ. ಮತ್ತೆ ಕದ್ದು ಮುಚ್ಚಿ ಅದೇ ಟೇಸ್ಟಿಂಗ್ ಪೌಡರ್ ಬಳಸಲ್ಲ ಅನ್ನೋದು ಏನು ಗ್ಯಾರಂಟಿ ಅಂತ ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.