ಕಾಪು, ಡಿ.18: ಸಮಾಜ ಸೇವಕ ಲೀಲಾಧರ ಶೆಟ್ಟಿಯವರ ಅಪ್ರಾಪ್ತ ವಯಸ್ಸಿನ ಸಾಕು ಮಗಳ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಪು ಪೊಲೀಸರು ಆಕೆಯ ಸ್ನೇಹಿತ ಸೇರಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ ನಿವಾಸಿ ಗಿರೀಶ್ (20), ನಾಪತ್ತೆಯಾಗಲು ಸಹಕರಿಸಿದ ಶಿರ್ವದ ರೂಪೇಶ್ (22), ಜಯಂತ್ (23) ಮತ್ತು ಮಜೂರು ನಿವಾಸಿ ಮೊಹಮ್ಮದ್ ಅಜೀಝ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಮತ್ತು ಲೀಲಾಧರ ಶೆಟ್ಟಿಯವರ ಸಾಕು ಪುತ್ರಿಯನ್ನು ಪೊಲೀಸರು ಕುಂಬ್ಳೆ ಬಳಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಲೀಲಾಧರ ಶೆಟ್ಟಿ ಯವರು 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದು, ಆಕೆ ಡಿಸೆಂಬರ್ 11 ರಂದು ಏಕಾಏಕಿ ನಾಪತ್ತೆಯಾಗಿದ್ದಳು. ಈ ಘಟನೆಯಿಂದ ನೊಂದು ಸಮಾಜಕ್ಕೆ ಹೆದರಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಗೆ ಸಂಬಂಧಪಟ್ಟಂತೆ ಕಾಪು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ಮತ್ತು ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು.
ಆರೋಪಿ ಗಿರೀಶ್ ವಿರುದ್ದ ಪೋಕ್ಸೋ, ಅತ್ಯಾಚಾರ, ಅಪಹರಣ ಪ್ರಕರಣ ಮತ್ತು ಸ್ನೇಹಿತರ ವಿರುದ್ದ ಪೋಕ್ಸೋ ಪ್ರಕರಣವನ್ನು ದಾಖಲಿಸಲಾಗಿದೆ.
ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಡಾಕ್ಟರ್ ಅರುಣ್ ಕೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ ಪಿ ಅರವಿಂದ ಕಲ್ಲಗುಜ್ಜಿ ಮಾರ್ಗದರ್ಶನದಲ್ಲಿ ಕಾಪು ಪಿ ಎಸ್ ಐ ಅಬ್ದುಲ್ ಖಾದರ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದೆ