ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (65) ವಿಷ ಹಾಕಿ ಕೊಲ್ಲುವ ಯತ್ನ ನಡೆದಿದೆ ಎನ್ನಲಾಗುತ್ತಿದೆ.
ಉಗ್ರ ದಾವೂದ್ನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವರದಿಯಾಗಿದೆ.
ಅಪರಿಚಿತರು ಆತನಿಗೆ ವಿಷ ನೀಡಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಆದರೆ ದಾವೂದ್ ಇಬ್ರಾಹಿಂ ವಿಷ ಸೇವಿಸಿದ ಬಗ್ಗೆ ಯಾವುದೇ ಅಧಿಕೃತ ವರದಿ ಹೊರಬಿದ್ದಿಲ್ಲ. ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಯ ಒಂದು ಮಹಡಿಯನ್ನು ದಾವೂದ್ಗಾಗಿಯೇ ಮೀಸಲಿಟ್ಟಿದ್ದು, ಉಳಿದ ಯಾವುದೇ ರೋಗಿಗಳಿಗೂ ಆ ಮಹಡಿಗೆ ಪ್ರವೇಶ ಇಲ್ಲ ಎನ್ನಲಾಗಿದೆ.
ಆತನ ಕುಟುಂಬಸ್ಥರು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾತ್ರ ಅಲ್ಲಿದ್ದಾರಂತೆ. ಮುಂಬೈ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಪ್ರಯತ್ನಿಸುತ್ತಿದ್ದಾರೆ. ಆತನ ಸಂಬಂಧಿ ಅಲಿಶಾಹ ಪರ್ಕರ್ ಮತ್ತು ಸಜಿದ್ ವಘ್ಲೆ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದಾರೆ. 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಹಾಗೂ ವಿವಿಧ ಕ್ರಿಮಿನಲ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಈತ ಬೇಕಾಗಿದ್ದಾನೆ.