ಹೆಬ್ರಿ: ಟಿಪ್ಪರ್ ಲಾರಿಯೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ಮಿಯ್ಯಾರು ಬಿಕ್ರಿಜಡ್ಡು ತಿರುವಿನಲ್ಲಿ ಅಕ್ಟೋಬರ್ 5ರಂದು ನಡೆದಿದೆ.ಮೃತರನ್ನು ಸುದರ್ಶನ್(28) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಬೈಕ್ ನಲ್ಲಿ ನಂಚಾರು ಕಡೆಯಿಂದ ಮುದ್ದೂರು ಕಡೆಗೆ ತೆರಳುತ್ತಿದ್ದರು. ಮಿಯ್ಯಾರು ಬಿಕ್ರಿಜಡ್ಡು ತಿರುವಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯು ಸುದರ್ಶನ್ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು, ಅವರನ್ನು ಬೈಕ್ ಸಮೇತ ಸುಮಾರು 15 ಅಡಿಯವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ.ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿ ವೈದ್ಯರು ಸುದರ್ಶನ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.