ಮಂಗಳೂರು : ಕರಾವಳಿ ಜನರ ನಿರೀಕ್ಷೆಯ ಮಂಗಳೂರು – ಮಡ್ಗಾಂವ್ ವಂದೇ ಭಾರತ್ ರೈಲಿಗೆ ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡುವುದು ಬಹುತೇಕ ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಪ್ರಯೋಗಿಕವಾಗಿ ಒಂದೇ ಭಾರತ್ ರೈಲು ಓಡಾಟ ಆರಂಭಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಇತರ ನಾಯಕರು ವಂದೇ ಭಾರತ್ ರೈಲನ್ನು ವೀಕ್ಷಣೆ ಮಾಡಿದರು.
ಡಿ.30 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್ ಫಾರಂನ ಉದ್ಘಾಟನೆ ಕೂಡ ನಡೆಯಲಿದೆ.
ಮಂಗಳೂರು – ಗೋವಾ ನಡುವಿನ ವಂದೇ ಭಾರತ್ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ, ಮಂಗಳವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ. ಪ್ರತಿದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1.05ಕ್ಕೆ ಮಡ್ಗಾಂವ್ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ವಂದೇ ಭಾರತ್ ರೈಲಿಗೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲಿನ ನಿರ್ವಹಣೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನಡೆಯಲಿದೆ.