ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಇದೀಗ ಸ್ಫೋಟದ ಆರೋಪಿ ಶಾರೀಖ್ಗೆ ಬರುತ್ತಿದ್ದ ಹಣದ ಮೂಲ ಪತ್ತೆಯಾಗಿದೆ.
ಕ್ರಿಪ್ಟೋ ಟು ಇಂಡಿಯನ್ ಕರೆನ್ಸಿ..!
ತನಿಖೆ ವೇಳೆ ಬಹಿರಂಗವಾಗಿರುವ ಮಾಹಿತಿ ಪ್ರಕಾರ, ಶಾರೀಖ್ನನ್ನು ಹ್ಯಾಂಡಲ್ ಮಾಡುತ್ತಿದ್ದ ಪಾಕಿಸ್ತಾನದ ಕರ್ನಲ್, MEXC ಕ್ರಿಪ್ಟೋ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸುತ್ತಿದ್ದ. ಇದನ್ನು ಶಾರಿಕ್ ಭಾರತೀಯ ಕರೆನ್ಸಿಗೆ ಬದಲಾವಣೆ ಮಾಡಿಕೊಳ್ತಿದ್ದ. ಅದಕ್ಕಾಗಿ ಟೆಲಿಗ್ರಾಂನಲ್ಲಿರುವ ಕ್ರಿಪ್ಟೋ ವ್ಯವಹಾರ ಮಾಡುವವರ ನೆರವನ್ನು ಶಾರೀಖ್ ಪಡೆದುಕೊಳ್ತಿದ್ದ ಎನ್ನಲಾಗಿದೆ.
ಸಂಪರ್ಕ ಹೇಗೆ..?
ಮೈಸೂರಲ್ಲಿರುವ ಕ್ರಿಪ್ಟೋ ಕರೆನ್ಸಿ ಏಜೆಂಟ್‌ಗಳ ಜೊತೆಗೆ ಶಾರೀಖ್ ಸಂಪರ್ಕ ಇಟ್ಟುಕೊಂಡಿದ್ದ. ಇದೇ ಏಜೆಂಟ್‌ಗಳು ಶಾರೀಖ್ಗೆ ನಗದು ಹಣವನ್ನು ನೀಡುತ್ತಿದ್ದರು. ಏಜೆಂಟ್‌ಗಳಿಗೆ ಕಮೀಷನ್ ರೂಪದಲ್ಲಿ ಶಾರೀಖ್ ಹಣ ನೀಡುತ್ತಿದ್ದ. ಮೈಸೂರಿನಿಂದ 2022 ಸೆಪ್ಟೆಂಬರ್ 10ರಂದು ಶಾರೀಖ್ ಮಂಗಳೂರಿಗೆ ಬಂದಿದ್ದ. ಮಧ್ಯಾಹ್ನದವರೆಗೆ ಮಂಗಳೂರು ನಗರದ ಹಲವೆಡೆ ಓಡಾಡಿದ್ದ.
ದೇವಸ್ಥಾನಗಳೇ ಟಾರ್ಗೆಟ್..!
ಮಂಗಳೂರಲ್ಲಿ ಓಡಾಡುವ ವೇಳೆ ಶಾರೀಖ್ ಅಲ್ಲಿರುವ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ್ದ. ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಕಟೀಲು ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಪಂಪ್‌ವೆಲ್ ಜಂಕ್ಷನ್ ನೋಡಿಕೊಂಡು ಬಂದಿದ್ದ. ಮಧ್ಯಾಹ್ನದ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದ. ಬಿ.ಸಿ ರೋಡ್‌ನಿಂದ ಬಸ್‌ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದಿದ್ದ.
ಧರ್ಮಸ್ಥಳ ಟು ಚಿಕ್ಕಮಗಳೂರು..!
ಅರ್ಧ ದಿನ ಧರ್ಮಸ್ಥಳದಲ್ಲಿ ಓಡಾಡಿದ್ದ ಶಾರಿಖ್ ಸಂಜೆ ಆಗ್ತಿದ್ದಂತೆ ಚಿಕ್ಕಮಗಳೂರಿಗೆ ಹೋಗಿದ್ದ. ಚಿಕ್ಕಮಗಳೂರಿನ ಎಂಜಿ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ರಾತ್ರಿ ತಂಗಿದ್ದ. ಸೆಪ್ಟೆಂಬರ್ 11ರಂದು ಅಲ್ಲಿರುವ ದೇವೀರಮ್ಮ ಬೆಟ್ಟ ಮತ್ತು ಬಾಬಾ ಬುಡನ್‌ಗಿರಿಗೆ ಹೋಗಿ ಬಂದಿದ್ದ. ಅಲ್ಲಿಂದ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದ ಎನ್ನಲಾಗಿದೆ.
ಬಾಂಬ್ ತಯಾರಿಸಿದ್ದು ಮೈಸೂರಲ್ಲಿ..!
ಮೈಸೂರಲ್ಲಿ ನವೆಂಬರ್ 18 ರಂದು ಬಾಂಬ್ ತಯಾರಿಸಲು ಶುರುಮಾಡಿದ್ದ. ಪ್ರೆಶರ್ ಕುಕ್ಕರ್ ಮೂಲಕ IED ಬಾಂಬ್ ತಯಾರಿಕೆಗೆ ಸಿದ್ಧತೆ ಆರಂಭಿಸಿದ್ದ. ಆರಂಭದಲ್ಲಿ 2.5 ಲೀಟರ್ ಸಾಮರ್ಥ್ಯದ ಕುಕ್ಕರ್ ಬಳಸಿದ್ದ. ಇದರಿಂದ ಜಾಸ್ತಿ ಹಾನಿ ಆಗಲ್ಲ ಎಂದು ಪ್ಲಾನ್ ಚೇಂಜ್ ಮಾಡಿದ್ದ. ಬಳಿಕ 5 ಲೀಟರ್ ಸಾಮರ್ಥ್ಯದ ಕುಕ್ಕರ್ ತಂದಿಟ್ಟಿದ್ದ ಶಾರೀಖ್, ನವೆಂಬರ್ 18 ರಿಂದ ರಾತ್ರಿ 19ರವರೆಗೆ ಅದೇ ಕೆಲಸ ಮಾಡಿದ್ದಾನೆ.
ಕರ್ನಲ್ ಸೂಚನೆ ಪ್ರಕಾರ ನಿದ್ದೆಗೆಟ್ಟು ಕುಕ್ಕರ್ ಬಾಂಬ್ ಸಿದ್ಧಪಡಿಸಿದ್ದ. ಕುಕ್ಕರ್ ಬಾಂಬ್ ಅಸೆಂಬಲ್ ಮಾಡುವಾಗ ಕೈಯಲ್ಲಿ ಕುಕ್ಕರ್ ಬಾಂಬ್ ಹಿಡಿದು ವಿಡಿಯೋ, ಫೋಟೋ ತೆಗೆದುಕೊಂಡಿದ್ದ. ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ISIS ಮಾದರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ವಿಡಿಯೋ ಮಾಡುವಾಗ ಹ್ಯಾಂಡ್ಲರ್ ಕರ್ನಲ್ ಹೆಸರು ಸಹ ಹೇಳಿದ್ದ ಎಂದು ತಿಳಿದುಬಂದಿದೆ.