ಕಾರು ಡಿಕ್ಕಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಯುವತಿ ಸಾವು

ಬಂಟ್ವಾಳ : ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ.

ಬಿಸಿರೋಡಿನ ಕೈಕಂಬ ‌ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು. ಸ್ಥಳೀಯ ‌ನಿವಾಸಿ ಚೈತ್ರ (22 ) ಮೃತ ಯುವತಿ.

ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರು ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆನ್ನಲಾಗಿದೆ.

ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಪ್ಟ್ ಕಾರು ಯುವತಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್, ಹಾಗೂ ಹೆಚ್.ಸಿ.ರಮೇಶ್ ಅವರು ಖಾಸಗಿ ವಾಹನದ ಮೂಲಕ ಗಾಯಾಳು ಚೈತ್ರಳನ್ನು ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಗಂಭೀರವಾಗಿ ಗಾಯಗೊಂಡಿರುವ ಈಕೆ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಮಧ್ಯರಾತ್ರಿ ಈಕೆ ಮೃತಪಟ್ಟ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಾದಾಚಾರಿ ಯುವತಿಗೆ ಡಿಕ್ಕಿ ಹೊಡೆದ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ಅಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಮನೆಯೊಂದರ ಕಾಂಪೌಂಡ್ ಗೆ ಕೂಡ ಗುದ್ದಿ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರು ಚಾಲಕ ಹಾಗೂ ಹಾಗೂ ಇವನ ಜೊತೆ ಇದ್ದ ಮೂವರು ಸಹಪ್ರಯಾಣಿಕ ಪರಾರಿಯಾಗಿದ್ದಾರೆನ್ನಲಾಗಿದೆ.

ಮೆಲ್ಕಾರ್ ಟ್ರಾಫಿಕ್ ಪೊಲಿಸರು ಸ್ಥಳಕ್ಕೆ ‌ಭೇಟಿ ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೈತ್ರ ಅವರು ಖ್ಯಾತ ಮೇಕಪ್ ಆರ್ಟಿಸ್ಟ್ ದಿ. ಭಾಸ್ಕರ್ ಆಚಾರ್ಯ ಅವರ ಮಗಳು. ಚೈತ್ರ ಮಂಗಳೂರಿನ‌ ಪ್ರಸಿದ್ದ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಜಾ ಪಡೆದುಕೊಂಡಿದ್ದಳು. ಚೈತ್ರಳಿಗೆ ನಿಶ್ಚಿತಾರ್ಥ ನಡೆದು ಮದುವೆಗೆ ದಿನ ನಿಗದಿಯಾಗಿದೆ. ಮಾ.3 ರಂದು ಕೊಡ್ಯಡ್ಕದ ಯುವಕನ ಜೊತೆ ಮದುವೆ ನಿಗದಿಯಾಗಿತ್ತು.

You cannot copy content from Baravanige News

Scroll to Top