ಗ್ಯಾಸ್ ಸಿಲಿಂಡರ್ ಇದ್ದೋರು KYC ಮಾಡಿಸಬೇಕೇ..!? ಈ ಸುದ್ದಿ ಎಷ್ಟು ನಿಜ?

ಸೋಷಿಯಲ್ ಮೀಡಿಯಾ ಜನರಿಂದ ಜನರಿಗೆ ಸಂಪರ್ಕ ಕೊಂಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅದರಿಂದ ವದಂತಿಗಳು ಹರಡಿ ಸಮಸ್ಯೆಗಳೇ ಹೆಚ್ಚಾಗುತ್ತಿದೆ. ಅದೇ ರೀತಿ ಗ್ಯಾಸ್ ಸಬ್ಸಿಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿಯನ್ನು ನಂಬಿದ ಜನರು, ಈ-ಕೆವೈಸಿ ಮಾಡಿಸಲು ಇಡೀ ದಿನ ಪರದಾಡ್ತಿದ್ದಾರೆ.

ಗ್ಯಾಸ್ ಸಿಲಿಂಡರ್ ಇದ್ದವರು ಡಿಸೆಂಬರ್ 31ರೊಳಗೆ E-KYC ಮಾಡಿಸಬೇಕು. ಮುಂದಿನ ದಿನಗಳಲ್ಲಿ ಮೋದಿ ಸರ್ಕಾರ 500 ರೂ ಸಬ್ಸಿಡಿ ನೀಡುತ್ತೆ. ನಿಮ್ಮ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿ. ಇಲ್ಲದಿದ್ರೆ, ನಿಮ್ಮ ಗ್ಯಾಸ್ ಸಿಲಿಂಡರ್, ವಾಣಿಜ್ಯ ಬಳಕೆ ಸಿಲಿಂಡರ್ಗೆ ಕನ್ವರ್ಟ್ ಆಗಿ, 1400 ರೂಪಾಯಿ ನೀಡಬೇಕಾಗುತ್ತೆ ಎಂದು ಯಾರೋ ಅನಾಮದೇಯ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಈ ಸುದ್ದಿಯನ್ನು ನೋಡಿ ಮಧ್ಯಮ ವರ್ಗದ ಜನರು, ಎದ್ನೋ ಬಿದ್ನೋ ಅಂತ, ಕೈಯಲ್ಲಿ ಆಧಾರ್ ಕಾರ್ಡ್ ಗ್ಯಾಸ್ ಬುಕ್ ಹಿಡಿದುಕೊಂಡು, ಸೂರ್ಯ ಹುಟ್ಟುಕೋ ಮೊದಲೇ ಗ್ಯಾಸ್ ಏಜನ್ಸಿಗಳ ಬಾಗಿಲ ಮುಂದೆ ಬಂದು ಕ್ಯೂ ನಿಂತು, ಕೆವೈಸಿ ಮಾಡಿಸಲು ಹರಸಾಹಸಪಡ್ತಿದ್ದಾರೆ.

ಈ ರೀತಿ ಕೇವಲ ಒಂದು ಕಡೆ ಮಾತ್ರ ಆಗಿಲ್ಲ ಹಲವು ಜಿಲ್ಲೆಯಲ್ಲಿ ಗ್ಯಾಸ್ ಗ್ರಾಹಕರು ತಲೆಬುಡ ಇಲ್ಲದ, ಸುಳ್ಳು ಸುದ್ದಿಯನ್ನು ನಂಬಿ, ಇಡೀ ದಿನ ಕೆಲಸ ಕಾರ್ಯಗಳನ್ನು ಬಿಟ್ಟು, ಪರದಾಡಿದ್ದಾರೆ. ಸದ್ಯ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಸಬ್ಸಿಡಿ ಸಿಕ್ಕರೆ ಸ್ವಲ್ಪವಾದ್ರೂ ಅನುಕೂಲ ಆಗುತ್ತೆ. ಒಂದ್ವೇಳೆ ಗಡುವು ಮುಗಿದ್ರೆ ಏನ್ ಮಾಡೋದು. ನಾವು ಕೆವೈಸಿ ಮಾಡಿಸಿಕೊಂಡೇ ಮನೆಗೆ ಹೋಗೋದು ಎಂದು ಪಟ್ಟು ಹಿಡಿದು ನಿಂತಿದ್ರು.

ಇ-ಕೆವೈಸಿ ಮಾಡಿಸಲು ಯಾವುದೇ ಗಡುವು ಇಲ್ಲ

ಇ-ಕೆವೈಸಿ ಬಗ್ಗೆ ಸ್ಪಷ್ಟನೆ ನೀಡಿರುವ ಗ್ಯಾಸ್ ಏಜನ್ಸಿ ಸಿಬ್ಬಂದಿ, ಡಿಸೆಂಬರ್ 31ರ ಗಡುವು ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇ-ಕೆವೈಸಿ ಮಾಡಿಸಲು ಸೂಚಿಸಿರೋದು ನಿಜ. ಅದಕ್ಕೆ ಯಾವುದೇ ಡೆಡ್ಲೈನ್ ಇಲ್ಲ ಎಂದು ರಾಜ್ಯದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳು ಸುದ್ದಿಯಿಂದ ಗ್ರಾಹಕರು ಸೇರಿದಂತೆ ಗ್ಯಾಸ್ ಏಜನ್ಸಿಗಳ ಸಿಬ್ಬಂದಿ ಕೂಡ ಇಡೀ ದಿನ ಪರದಾಡಿದ್ದರು. ಇನ್ನು ಮೇಲಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳ ಸತ್ಯಾಸತ್ಯತೆ ಬಗ್ಗೆ ಎಚ್ಚರಿಕೆ ಇರಲಿ.

Scroll to Top