ಉಡುಪಿ ನೇಜಾರು ಹತ್ಯಾಕಾಂಡದ ಆರೋಪಿ ಪ್ರವೀಣ್ ಚೌಗುಲೆ ವಿರುದ್ದದ ಚಾರ್ಜ್ ಶೀಟ್ ನಾಳೆ ನ್ಯಾಯಾಲಯಕ್ಕೆ ಸಲ್ಲಿಕೆ..!

ಉಡುಪಿ : ನೇಜಾರು ಹತ್ಯಾಕಾಂಡದ ಆರೋಪಿ ಪ್ರವೀಣ್ ಚೌಗುಲೆ(39) ಪ್ರಕರಣದ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಳೆ( ಫೆಬ್ರವರಿ 9 ರಂದು ) ಚಾರ್ಜ್‌ಶೀಟ್‌ನ್ನು ಪ್ರಕರಣದ ತನಿಖಾಧಿಕಾರಿಗಳು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಶೇ.90ರಷ್ಟು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈಸೇರಿದೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳಿಸಿರುವ ಪೊಲೀಸರು ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ. ಈ ಕೊಲೆ ಕೃತ್ಯ ನಡೆದು ಫೆ.12ಕ್ಕೆ ಮೂರು ತಿಂಗಳು ತುಂಬಲಿವೆ. ಆದುದರಿಂದ ಮೂರು ತಿಂಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ಗಡುವು ಇರುವುದರಿಂದ ಫೆ.9ರಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲ್ಲಿದ್ದಾರೆಂದು ತಿಳಿದು ಬಂದಿದೆ.

ಈ ಮಧ್ಯೆ ಆರೋಪಿ ಚೌಗುಲೆಯ ನ್ಯಾಯಾಂಗ ಬಂಧನ ಅವಧಿಯನ್ನು ಫೆ.12ರವರೆಗೆ ವಿಸ್ತರಿಸಿ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಬುಧವಾರ ಆರೋಪಿಯ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ನ್ಯಾಯಾಧೀಶರು ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಿಸಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಹಾಜರಿದ್ದರು.

You cannot copy content from Baravanige News

Scroll to Top