ಕಾಪು: ಹಳೆಯಂಗಡಿಯ ಪಾವಂಜೆ ದೇವಸ್ಥಾನದ ಬಳಿಯ ಹೊಳೆಯಿಂದ ಮರಳನ್ನು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟಿಪ್ಪರೊಂದನ್ನು ಕಾಪು ಪೊಲೀಸರು ಬುಧವಾರ ರಾತ್ರಿ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬಳಿ ತಡೆ ಹಿಡಿದು, ಮರಳು ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಟಿಪ್ಪರ್ ಚಾಲಕ ರಾಜು ಹಾಗೂ ವಾಹನ ಮಾಲಕ ಕಾರ್ನಾಡಿನ ಮಧುಸೂದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಪು ಠಾಣೆ ಎಎಸ್‌ಐ ರಾತ್ರಿ ರೌಂಟ್ಸ್‌ನಲ್ಲಿದ್ದ ವೇಳೆ ಮಲ್ಲಾರು ಕಡೆಗೆ ಹೋಗುತ್ತಿದ್ದ ಟಿಪ್ಪರನ್ನು ಸಂಶಯದಿಂದ ತಡೆದು ಪರಿಶೀಲಿಸಿದಾಗ ಅಕ್ರಮ ಪತ್ತೆಯಾಯಿತು.
ಚಾಲಕನಲ್ಲಿ ವಿಚಾರಿಸಿದಾಗ ಮಧುಸೂದನ್ ಎಂಬವರು ಪಾವಂಜೆ ಹೊಳೆಯಲ್ಲಿ ಯಿಂದ ಮರಳನ್ನು ತೆಗೆಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಮಧುಸೂದನ್ ಹಾಗೂ ರಾಜು ಅವರು ಸರಕಾರಿ ಸ್ವತ್ತನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ಪೊಲೀಸರು ವಿವರಿಸಿದ್ದಾರೆ.