ಕಾಪು: ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಗಬ್ಬದ ದನ ಸಾವು – ಮೆಸ್ಕಾಂ ವಿರುದ್ಧ ಆಕ್ರೋಶ

ಕಾಪು, ಫೆ 14: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿ ಗಬ್ಬದ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಕರಟಿ, ಅಸುನೀಗಿದ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆಯ ವೇಳೆ ನಡೆದಿದೆ.

ಉಚ್ಚಿಲ ಭಾಸ್ಕರ ನಗರ ನಿವಾಸಿ ಇಸ್ಮಾಯಿಲ್‌ ರವರ ಮೇವನ್ನರಸಿ ಬಂದ 4ತಿಂಗಳ ಗಬ್ಬದ ದನವೊಂದು ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಯ ಬಳಿ ಇದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್‌ ಬಳಿ ಮೇಯುತ್ತಿದ್ದ ವೇಳೆ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿಕೊಂಡಿತ್ತು. ಅದರಿಂದ ಬಿಡಿಸಿಕೊಳ್ಳುವ ವೇಳೆ ಹಳೆಯ ಜೋತು ಬಿದ್ದಿದ್ದ ಸ್ಟೇ ವಯರ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿ ಗಬ್ಬದ ದನವು ವಿದ್ಯುತ್ ಆಘಾತಕ್ಕೀಡಾಗಿತ್ತು. ದನದ ಕಾಲು ಸುಟ್ಟು ಎಲುಬು ಕಂಡು ಬರುತ್ತಿದ್ದು, ಸ್ಥಳದಲ್ಲಿಯೇ ಅಸುನೀಗಿದೆ.

ಇನ್ನು ಮಾಹಿತಿ ಪಡೆದ ಮೆಸ್ಕಾಂ ನಿರ್ವಾಹಕ ಸ್ಥಳಕ್ಕೆ ಬಂದು ವಿದ್ಯುತ್ ನಿಲುಗಡೆಗೊಳಿಸಿದ್ದಾರೆ. ಸದಾ ಜನನಿಬಿಡ, ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಹಳೆಯ ಸ್ಟೇ ವಯರ್ ಹೊಂದಿದ್ದ ಈ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮರ್ಪಕ ನಿರ್ವಹಣೆ ಇಲ್ಲದೆ ಇಂತಹ ಅವಘಡ ಘಟಿಸಿದ್ದು, ಸಾರ್ವಜನಿಕ ವಲಯದಲ್ಲಿ ಅಸಹನೆ ವ್ಯಕ್ತವಾಗಿದೆ.

ಒಂದೆರಡು ಅಡಿ ಪಕ್ಕದಲ್ಲಿಯೇ ಇದೇ ಟ್ರಾನ್ಸ್ಫಾರ್ಮರ್ ಬಳಿ ಮೀನು ಮಾರಾಟದ ಭರಾಟೆಯೂ ಜೋರಾಗಿ ನಡೆಯುತ್ತಿದ್ದು, ಸದಾ ಮೀನು ಮಾರಾಟಗಾರರು, ಖರೀದಿದಾರರು ಸೇರುವ ಸ್ಥಳ ಇದಾಗಿದೆ.

ವಿದ್ಯುತ್ ಪ್ರವಹಿಸುವ ವೇಳೆಗೆ ದನವು ಮತ್ತೊಂದು ಮಗ್ಗುಲಿಗೆ ತಿರುಗುತ್ತಿದ್ದರೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಸಂಭಾವ್ಯ ಅನಾಹುತವೊಂದು ತಪ್ಪಿದೆ. ಮೆಸ್ಕಾಂ ಈ ಬಗ್ಗೆ ಕ್ರಮಕೈಗೊಂಡು ದನದ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Scroll to Top