ಉಡುಪಿ : ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಫೆ. 17ರಂದು ನಡೆಯಲಿರುವ ಕಾಂಗ್ರೆಸ್‌ನ ರಾಜ್ಯ ಮಟ್ಟದ ಸಮಾವೇಶದಲ್ಲಿ ಜಿಲ್ಲೆಯಿಂದ 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕರ್ತರನ್ನು ಹುರಿದುಂಬಿಸಲು ಮತ್ತು ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆಯಾಗಿ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ.
ಬೂತ್‌ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲ ಹಂತದ ಕಾರ್ಯಕರ್ತರು, ಪಕ್ಷದ ಮುಂಚೂಣಿ ಘಟಕದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಮುಖರಾದ ಕೆ.ಸಿ. ವೇಣುಗೋಪಾಲ್, ರೋಝೀ ಜಾನ್, ಸಲೀಂ ಅಹ್ಮದ್ ಸಹಿತ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಹಾಗೂ ದ.ಕ. ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಮರಳಿ ಪಡೆಯುವ ಗುರಿಯೊಂದಿಗೆ ಈ ಸಮಾವೇಶ ನಡೆಯಲಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯವೂ ಆಗಲಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಜತೆಗೆ ಧಾರ್ಮಿಕ ಭಾವನೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ತಂತ್ರದ ವಿರುದ್ಧವೂ ನಮ್ಮ ಹೋರಾಟ ನಡೆಯಲಿದೆ ಎಂದರು.
ಎರಡು ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿ ಅಂತಿಮವಾಗಿಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಅನೇಕ ಆಕಾಂಕ್ಷಿಗಳು ಇರುತ್ತಾರೆ. ಎಲ್ಲ ಭಾಗದಿಂದಲೂ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಭಾಸ್ಕರ್ ರಾವ್ ಕಿದಿಯೂರು, ಮಹಾಬಲ ಕುಂದರ್, ಕಿರಣ್ ಹೆಗ್ಡೆ, ಜಯ ಕುಮಾರ ಉಪಸ್ಥಿತರಿದ್ದರು.