ಸಿನಿಮಾ, ಧಾರವಾಹಿಗಳಲ್ಲಿ ನೇಮದ ಅನುಕರಣೆ : ದೈವಾರಾಧಕರ ಹೋರಾಟಕ್ಕೆ ವಿಹೆಚ್ಪಿ ಬಜರಂಗದಳ ಬೆಂಬಲ

ಮಂಗಳೂರು : ಧಾರವಾಹಿ, ಸಿನಿಮಾಗಳಲ್ಲಿ ದೈವರಾಧನೆಗೆ ಅಪಮಾನವಾಗುತ್ತಿರುವ ವಿಚಾರವಾಗಿ ದೈವಾರಾಧಕರು ನಡೆಸುತ್ತಿರುವ ಹೋರಾಟಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ  ಬೆಂಬಲ ವ್ಯಕ್ತಪಡಿಸಿದೆ.

ದೈವರಾಧನೆಗೆ ಅಪಮಾನವಾಗುತ್ತಿರುವ ಸಂಬಂಧ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತುಳುನಾಡ ದೈವರಾಧನ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ಮುಂದೆ ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು ಎಂದು ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ದೈವರಾಧನೆಗೆ ಆದರದ್ದೆ ಆದ ಮಹತ್ವವಿದೆ. ಆದರೆ ಚಲನಚಿತ್ರ, ಧಾರವಾಹಿ, ನಾಟಕಗಳಲ್ಲಿ ನಮ್ಮ ನಂಬಿಕೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಇದನ್ನು ವಿಎಚ್ಪಿ ಬಜರಂಗದಳ ವಿರೋಧಿಸುತ್ತದೆ. ದೈವರಾಧಕರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಚಲನಚಿತ್ರ ಮಾಡುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಸಿನಿಮಾ, ಧಾರವಾಹಿಗಳಲ್ಲಿ ದೈವದ ಕಥೆ, ಇತಿಹಾಸ, ಚರಿತ್ರೆ, ನಂಬಿಕೆ ಹೇಳಲಿ. ಆದರೆ ಕೋಲ, ನೇಮೋತ್ಸವದ ಅನುಕರಣೆ ಮಾಡಬಾರದು. ಕಾಲಿಗೆ ಗಗ್ಗರ ಹಾಕೋದಕ್ಕೆ ಒಂದು ಕ್ರಮ ಹಾಗೂ ಅದರದ್ದೇ ಆದ ರೀತಿ ನೀತಿಗಳು ಇವೆ. ವೇಷಭೂಷಣ ಹಾಕುವುದಾದರೂ ಅದರದ್ದೇ ಆದ ಮಹತ್ವವಿದೆ. ಆದರೆ ಅದೆಲ್ಲಾವನ್ನು ಗಾಳಿಗೆ ತೂರಲಾಗುತ್ತಿದೆ ಎಂದರು.

ಬೇರೆ ಧರ್ಮದ ದೇವರ ಫಿಲ್ಮ್ ತೆಗೆಯುವ ಧೈರ್ಯ ಇದೆಯಾ..!?

ದುಡ್ಡಿಗೆ, ಪ್ರಚಾರಕ್ಕಾಗಿ ದೈವಾರಾಧನೆಯನ್ನು ಚಲನಚಿತ್ರದಲ್ಲಿ ತೋರಿಸುವುದು ಸರಿಯಲ್ಲ. ಚಲನಚಿತ್ರ ನಿರ್ಮಾಪಕರಿಗೆ ತಾಕತ್ತು ಇದ್ದರೆ.., ಹಿಂದುಗಳು ಅಲ್ಲದ ಬೇರೆ ಸಮುದಾಯದ ಧಾರ್ಮಿಕ ಆಚರಣೆ ಚಿತ್ರೀಕರಣ ಮಾಡಲಿ. ನಾಟಕ, ಫಿಲ್ಮ್ ತೆಗೆದು ತೋರಿಸಲಿ. ಆ ದೈರ್ಯ ಇದೆಯಾ? ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಈ ರೀತಿ ಮಾಡುವುದು ಸರಿಯಲ್ಲ ಎಂದರು.

ದೈವರಾಧಕರ ಹೋರಾಟಕ್ಕೆ ಪೂರ್ತಿ ಬೆಂಬಲವನ್ನು ವಿಹೆಚ್ಪಿ, ಬಜರಂಗದಳ ನೀಡುತ್ತದೆ. ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ. ಮುಂದಿನ ದಿನದಲ್ಲಿ ಮತ್ತೆ ಕೂತು ಯಾವ ರೀತಿಯ ಹೋರಾಟ ಮಾಡಬಹುದು ಎಂದು ಯೋಚಿಸುತ್ತೇವೆ ಎಂದರು.

Scroll to Top