ಭೋಪಾಲ್ : ಈಗಿನ ಕಾಲ ಬದಲಾಗಿ ಹೋಗಿದೆ. ಹುಡುಗಿ ನೋಡಲು ಹೋದರೆ ಸರ್ಕಾರಿ ಉದ್ಯೋಗ ಇದ್ಯಾ? ಐಟಿ ಕಂಪನಿಯಲ್ಲಿ ಕೆಲಸ ಇದ್ಯಾ? ಜಮೀನು, ಓಡಾಡಲು ಕಾರ್ ಇದ್ಯಾ ಅಂತಾ ಕೇಳುತ್ತಾರೆ. ಮದುವೆಯಾಗೋ ವರ ರೈತ ಆಗಿದ್ದರೆ ಯುವತಿಯರು ಹಿಂದೇಟು ಹಾಕುತ್ತಾರೆ. ಇಂತಹ ಕಾಲದಲ್ಲಿ ಹುಡುಗರಿಗೆ ಹುಡುಗಿ ಸಿಗುವುದು ಕಷ್ಟನೇ ಬಿಡಿ. ಆದರೆ ಎಷ್ಟೇ ಹುಡುಕಿದರೂ ಹುಡುಗಿ ಸಿಗದಿದ್ದ ಕಾರಣ ಇಲ್ಲೊಬ್ಬ ಆಟೋ ಚಾಲಕ ಇದರಿಂದ ಬೇಸತ್ತು ತನ್ನ ಇ-ರಿಕ್ಷಾಗೆ ಫೋಟೊ ಹಾಗೂ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ದಾಮೋಹ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ದೀಪೇಂದ್ರ ರಾಥೋಡ್ (29) ಎಂಬುವವರು ಬಯೋಡೇಟಾ, ಫೋಟೊ ತಮ್ಮ ಆಟೋಗೆ ಅಳವಡಿಸಿದ್ದಾರೆ.
ಈ ಮೂಲಕವಾದರೂ ಹುಡುಗಿ ಸಿಗಬಹುದು ಎಂದು ಉಪಾಯ ಮಾಡಿದ್ದಾರೆ. ಇನ್ನೂ, ಈ ಬಗ್ಗೆ ಮಾತನಾಡಿದ ಚಾಲಕ, ನಾನು ಒಂದಷ್ಟು ಹುಡುಗಿಯರನ್ನು ನೋಡಿದೆ. ಅವರು ಹಣ-ಆಸ್ತಿ ನೋಡಿದರು. ಆಟೋ ಡ್ರೈವರ್ ಎಂದ ಕೂಡಲೇ ಒಂದಷ್ಟು ಹುಡುಗಿಯರು ಮೂಗು ಮುರಿದರು.
ನನ್ನ ಸಂಬಂಧಿಕರೂ ಹುಡುಗಿ ಹುಡುಕುವುದನ್ನು ಬಿಟ್ಟರು. ಹಾಗಾಗಿ, ಬಯೋಡೇಟಾ, ಫೋಟೊವನ್ನು ಆಟೋಗೆ ಅಳವಡಿಸಿದ್ದೇವೆ. ಯಾವುದಾದರು ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ. ನಮ್ಮ ಜಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ. ಹಾಗಂತ, ನಾನು ಜಾತಿ-ಧರ್ಮದ ಗಡಿ ಹಾಕಿಕೊಂಡಿಲ್ಲ. ನಾನು ಯಾವುದೇ ಜಾತಿ-ಧರ್ಮದ ಹುಡುಗಿಯನ್ನು ಮದುವೆಯಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ದೀಪೇಂದ್ರ ರಾಥೋಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿದ ನೆಟ್ಟಿಗರು ಒಳ್ಳೆಯ ಉಪಾಯ, ಹುಡುಗಿ ಸಿಕ್ಕರೆ ಮದುವೆಗೆ ಕರೆಯುವುದನ್ನು ಮಿಸ್ ಮಾಡಬೇಡಿ ಅಂತಾ ಕಾಮೆಂಟ್ ಹಾಕಿದ್ದಾರೆ.