ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ನಟ ರಕ್ಷಿತ್‌ ಶೆಟ್ಟಿ ಭೇಟಿ

ಉಡುಪಿ: ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ಹುಟ್ಟೂರು ಉಡುಪಿಯಲ್ಲಿ ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು.

ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.

ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು ನಾನು ಬಾಲ್ಯದಲ್ಲಿ ಪ್ರತಿವರ್ಷ ತಂದೆಯೊಂದಿಗೆ ಕಾಪುವಿನಲ್ಲಿ ಬಾವನ ಮನೆಗೆ ಬರುವಾಗ ಮಾರಿಗುಡಿಗೆ ಬಂದು ಹೋಗುತ್ತಿದ್ದೆ, ಈಗ ಇದರ ಸಂಪೂರ್ಣ ಚಿತ್ರಣವೆ ಬದಲಾಗಿದೆ, ನನ್ನ ಬಾವ ವಾಸುದೇವ ಶೆಟ್ರ ಮುಂದಾಳತ್ವದಲ್ಲಿ ಈ ಕೆಲಸ ನಡೆಯುತ್ತಿದೆ, ಸುಮಾರು ವರ್ಷಗಳಿಂದ ಅವರು ಈ ದೇವಸ್ಥಾನವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬ ಚಿಂತನೆಯಲ್ಲಿದ್ದರು, ಪುರಾತನ ಕಾಲದಲ್ಲಿ ಈ ರೀತಿಯಾಗಿ ಕಲ್ಲಿನ ದೇವಸ್ಥಾನಗಳನ್ನು ಕಟ್ಟುತ್ತಿದ್ದರು, ಈಗಿನ ಕಾಲದಲ್ಲಿ ಅನೇಕ ಕಡೆ ಕಾಂಕ್ರೀಟ್ ನಲ್ಲೆ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ, ದೇವಸ್ಥಾನ ಇದ್ದರೆ ಹೀಗಿರಬೇಕು, ಇಳಕಲ್ಲ್ ಕೆಂಪು ಶಿಲೆಯಲ್ಲಿ ಗರ್ಭಗುಡಿ ಬಹಳಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪುಣೆ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಆರ್. ಶೆಟ್ಟಿ ಪಾದೂರು ಹೊಸಮನೆ, ಆರ್ಥಿಕ ಸಮಿತಿಯ ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕರಾದ ಬಿ. ಕೆ. ಶ್ರೀನಿವಾಸ್, ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕ ಬೀನಾ ವಿ. ಶೆಟ್ಟಿ, ಸಂಚಾಲಕರುಗಳಾದ ಅನುರಾಧ ಮನೋಹರ್ ಶೆಟ್ಟಿ, ಅರ್ಚನಾ ಶೆಟ್ಟಿ, ಕವಿತಾ ಶೆಟ್ಟಿ, ಅನಿತಾ ಹೆಗ್ಡೆ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Scroll to Top