ಉಡುಪಿ : ಮೀನುಗಾರರ ಕಿಡ್ನ್ಯಾಪ್ ಪ್ರಕರಣವನ್ನ ಮಲ್ಪೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಭೇದಿಸಿದ್ದಾರೆ.
ಫೆಬ್ರವರಿ 19 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಕೃಷ್ಣ ಹೆಸರಿನ ಬೋಟ್ನಲ್ಲಿ ಮೀನುಗಾರರೆಲ್ಲರೂ ತೆರಳಿದ್ದರು. ಏಳು ದಿನದ ಮೀನುಗಾರಿಕೆ ನಡೆಸಿ ಫೆಬ್ರವರಿ 27 ರಂದು ವಾಪಸ್ ಆಗುತ್ತಿದ್ದ ವೇಳೆ ತಾಂತ್ರಿಕ ಕಾರಣದಿಂದ ಮುಂಜಾನೆ ಮೂರು ಗಂಟೆಗೆ ಕೆಟ್ಟು ನಿಂತಿತ್ತು. ಇದೇ ಸಮಯಕ್ಕೆ ಅಪರಿಚಿತ ಬೋಟ್ನಲ್ಲಿ ಬಂದಿದ್ದ 25 ಜನರಿದ್ದ ತಂಡವು ಏಕಾಎಕಿ ದಾಳಿ ನಡೆಸಿ ದರೋಡೆ ಮಾಡಿದ್ದಲ್ಲದೇ, ಮೀನುಗಾರರನ್ನು ಕಿಡ್ನಾಪ್ ಮಾಡಿದ್ದರು.
ಬೋಟ್ ದಡಕ್ಕೆ ಎಳೆದೊಯ್ದು ಮೀನುಗಾರರನ್ನು ಕೂಡಿ ಹಾಕಿ ಚಿತ್ರಹಿಂಸೆ
ಇನ್ನು ಬೋಟ್‌ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು ಮತ್ತು 7500 ಲೀಟರ್ ಡೀಸೆಲ್ ದೋಚಿದ ದುಷ್ಕರ್ಮಿಗಳು, ಬೋಟ್ನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೀನುಗಾರಿಕಾ ಬಂದರಿಗೆ ಎಳೆದೊಯ್ದಿದ್ದಾರೆ. ಬಳಿಕ ಮೀನುಗಾರರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಈ ವಿಷಯ ಗೊತ್ತಾಗುತ್ತಲೇ ಬೋಟ್ ಮಾಲಕರ ಜೊತೆ ಮಲ್ಪೆ ಪೊಲೀಸರು ಭಟ್ಕಳಕ್ಕೆ ತೆರಳಿ ಮೀನುಗಾರರನ್ನು ರಕ್ಷಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ದರೋಡೆ, ಕಿಡ್ನ್ಯಾಪ್ ಮಾಡಿದ ತಂಡಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.