ಶಿರ್ವ : ಅಪಘಾತ ವಲಯವಾಗಿ ಪರಿಣಮಿಸಿರುವ ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಪಂಜಿಮಾರು ಬಸ್ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ಮೋರಿ ನಿರ್ಮಿಸಲು ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಬಸ್ ನಿಲ್ದಾಣದಿಂದ ರಾಬಿನ್ ಬಸ್ ನಿಲ್ದಾಣದವರೆಗಿನ ರಸ್ತೆಯ ಕೋಡು-ಪಂಜಿಮಾರು ತಿರುವಿನ ಇಳಿಜಾರಿನ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು, ತಗ್ಗು ಪ್ರದೇಶದಲ್ಲಿ ಮೋರಿ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಮಧ್ಯೆ ಮೋರಿ ನಿರ್ಮಿಸಲು ಹೊಂಡ ತೋಡಿ ವಾರ ಕಳೆದರೂ ಯಾವುದೇ ಸುರಕ್ಷಾ ತಡೆ ಬೇಲಿಗಳನ್ನಿರಿಸದೆ ಇಲಾಖಾಧಿಕಾರಿಗಳು/ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆಯುವ ಸಂಭವವಿದೆ.
ಒಂದು ಬದಿಯಲ್ಲಿ ಮಾತ್ರ ಬ್ಯಾರಿಕೇಡ್ ಇಟ್ಟು ಸಣ್ಣ ಫ್ಲೆಕ್ಸ್ ಫಲಕ ಅಳವಡಿಸಲಾಗಿದೆ.ಇನ್ನೊಂದು ಬದಿಯಲ್ಲಿ ಯಾವುದೆ ಸುರಕ್ಷಾ ನಿಯಮ ಪಾಲಿಸದೆ ಒಂದು ರೆಡ್‌ಟೇಪ್ ಕಟ್ಟಲಾಗಿದ್ದು, ರಾತ್ರಿ ವೇಳೆ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಗೋಚರಿಸಿದೆ ಇಳಿಜಾರಿನಲ್ಲಿ ಇಲಾಖೆ ತೋಡಿದ ಗುಂಡಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ತಿರುವು ಇರುವ ಈ ರಸ್ತೆಯಲ್ಲಿ ಈಗಾಗಲೇ ಹಲವಾರು ಅಪಘಾತಗಳು ನಡೆದು ಜೀವಬಲಿಯಾಗಿದ್ದು, ಆಗಾಗ್ಗೆ ನಡೆಯುವ ಅಪಘಾತ ಗಳಿಂದಾಗಿ ವಾಹನ ಸವಾರರ ಜೀವಕ್ಕೆ ಸಂಚಕಾರವಿದೆ.
ಕಟಪಾಡಿ-ಶಿರ್ವ 10.5 ಕಿ.ಮೀ. ರಾಜ್ಯ ಹೆದ್ದಾರಿಯ 8.5 ಕಿ.ಮೀ. ರಸ್ತೆ ಕಾಪು ಶಾಸಕರ ಅನುದಾನದ ಸುಮಾರು 7 ಕೋ.ರೂ. ವೆಚ್ಚದಲ್ಲಿ ಪಂಜಿಮಾರು ಫಲ್ಕೆಯವರೆಗೆ 2018ರಲ್ಲಿ ದ್ವಿಪಥಗೊಂಡು ವಿಸ್ತರಣೆಯಾಗಿತ್ತು. ಮಾಣಿಪ್ಪಾಡಿ ಫಲ್ಕೆಯಿಂದ ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮಿ. ರಸ್ತೆಯು ಅಂಕುಡೊಂಕಾಗಿದ್ದು 6 ವರ್ಷ ಕಳೆದರೂ ದ್ವಿಪಥಗೊಳ್ಳದೆ ನನೆಗುದಿಗೆ ಬಿದ್ದಿದ್ದು ಅಪಘಾತ ವಲಯವಾಗಿ ಪರಿಣಮಿಸಿದೆ. ಈ ಅವಧಿಯಲ್ಲಿ ಎರಡೆರಡು ಸರಕಾರಗಳು ಆಡಳಿತ ನಡೆಸಿದರೂ ರಸ್ತೆ ವಿಸ್ತರಣೆ ಕಾಮಗಾರಿ ನಡೆದು ತಿರುವು ರಸ್ತೆ ನೇರವಾಗಿ ಸುವ್ಯವಸ್ಥಿತ ರಸ್ತೆಯಾಗುವ ನಾಗರಿಕರ ನೀರೀಕ್ಷೆ ಸುಳ್ಳಾಗಿದೆ.