ಬೆಳಗಾವಿ : ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿಸಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ಶೋಭಾರನ್ನು ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಏನೆಂಬುದು ಗೊತ್ತಾಗುತ್ತವೆ. ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ. ಅದಕ್ಕಾಗಿ ನಮ್ಮ ಹೈಕಮಾಂಡ್ ಬಗ್ಗೆ ನನಗೆ ನಂಬಿಕೆಯಿದೆ, ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ಶೋಭಾ ಭರವಸೆ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕೆಲಸ ಕೊಡಲಿ, ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಜಾತಿ ಸಮೀಕರಣ ಕಾರಣಕ್ಕೆ ಕೆಲ ಸಂದರ್ಭದಲ್ಲಿ ಇದು ವ್ಯತ್ಯಾಸ ಆಗಬಹುದಷ್ಟೇ. ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿಯಿಂದ ನನಗೆ ಅನುಕೂಲ ಆಗಲಿದೆ. ಪಿತೂರಿ ಮಾಡಿದಾಗಲೇ ಹೈಕಮಾಂಡ್ ನಮ್ಮ ಬಗ್ಗೆ ಗಮನ ಕೊಡುತ್ತದೆ. ವಿರೋಧ ಏಕೆ ಮಾಡ್ತಿದ್ದಾರೆ ಎಂಬುದರ ವರದಿ ತರಿಸಿಕೊಳ್ಳುತ್ತಾರೆ, ಆಗ ಸತ್ಯ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಹಳಷ್ಟು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂಬ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ. ಗೆಲ್ಲುವ ಪಕ್ಷದಿಂದ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ, ಅದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ ಎಂದಿದ್ದಾರೆ.
ಟಿಕೆಟ್ ಕೊಡುವ ಬಗ್ಗೆ ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ, ನಮ್ಮ ಕೇಂದ್ರ ಚುನಾವಣೆ ಮಂಡಳಿ ಇದೆ. ಯಾರಿಗೆ ಎಲ್ಲಿಂದ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು, ಅದರಿಂದಾಗುವ ಲಾಭ ಏನು ಎಂಬುದರ ಆಧಾರದ ಮೇಲೆ ಖಂಡಿತವಾಗಿ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರಿಗೆಗೆ ಟಿಕೆಟ್ ಸಿಗುತ್ತೆ, ಸಿಗಲ್ಲ ಎಂಬುದು ನನಗೆ ಗೊತ್ತಿಲ್ಲ. ಈಗ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂಬ ಸಂಗತಿ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತೆಂಬುದನ್ನು ಪ್ರಧಾನಿಯೂ ಹೇಳಿಲ್ಲ, ನಡ್ಡಾ ಅವರೂ ಹೇಳಿಲ್ಲ, ಶಾ ಕೂಡ ಹೇಳಿಲ್ಲ. ಇವೆಲ್ಲ ಊಹಾಪೋಹ ಎನಿಸುತ್ತದೆ, ಮೂರ್ನಾಲ್ಕು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ, ಆಗ ಸತ್ಯ ಹೊರಬರುತ್ತದೆ ಎಂದು ಶೋಭಾ ಹೇಳಿದ್ದಾರೆ.
ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ: ಶೋಭಾ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಮುಂದಿಟ್ಟುಕೊಂಡು ಮತ ಕೇಳಲು ಹೊರಟಿದೆ. ಬಿಜೆಪಿ ಯಾವ ಮಾನದಂಡ ಇಟ್ಟುಕೊಂಡು ಲೋಕಸಭೆಯಲ್ಲಿ ಮತ ಕೇಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಭಾ, ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ. 10 ವರ್ಷಗಳ ಅಭಿವೃದ್ಧಿಯ ಆಧಾರದ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಆದಂಥ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು ಇದು ನಮ್ಮ ಶಕ್ತಿ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಗೌರವದ ದೂರದೃಷ್ಟಿ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೊಲ್ ಬೆಲೆ ಇಳಿಕೆ ಮಾಡಿದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಲೆ ಇಳಿಕೆಗೂ ಚುನಾವಣೆಗೂ ಸಂಬಂಧವಿಲ್ಲ. ಗ್ಯಾಸ್, ಪೆಟ್ರೋಲ್‌ನಲ್ಲಿ ನಾವಿನ್ನೂ ಸ್ವಾವಲಂಬಿ ಆಗಿಲ್ಲ. ಈ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿ ಅವರು ಯೋಜನೆ ರೂಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ಎಲ್ಲವನ್ನೂ ನಾವು ವಿದೇಶದಿಂದ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. ವಿದೇಶಿ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತದೆ. ಇದರಲ್ಲೂ ನಾವು ಸ್ವಾವಲಂಬನೆ ಸಾಧಿಸಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಶೇ. 20 ರಷ್ಟು ಎಥೆನಾಲ್ ಬಳಸಲು ಆರಂಭಿಸಿದ್ದೇವೆ, ಅದರ ಪ್ರಮಾಣವೂ ಹೆಚ್ಚಾಗಬೇಕು. ನಮ್ಮ ಪೆಟ್ರೋಲಿಯಂ ಮೂಲಗಳನ್ನು ಅನ್ವೇಷಣೆ ಮಾಡಬೇಕಿದೆ. ಭಾರತದ ಜನಸಂಖ್ಯೆಗೆ ಇದು ದೊಡ್ಡದು, ಖಾದ್ಯತೈಲ ಎಲ್ಲರಿಗೂ ಕೊಡಲೇಬೇಕು. ತೈಲ ಸಿಕ್ಕಿಲ್ಲ ಅಂದ್ರೆ ಹಾಹಾಕಾರ ಶುರುವಾಗುತ್ತದೆ. ಈರುಳ್ಳಿ, ಟೊಮೊಟೊ ಸಲುವಾಗಿ ಸರ್ಕಾರ ಬಿದ್ದ ಉದಾಹರಣೆ ಇವೆ. ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಬೀಜ, ಟೆಕ್ನಾಲಜಿ ನೀಡುತ್ತಿದ್ದೇವೆ. ಯುಪಿಎ ಸಮಯದಲ್ಲಿನ ಲೋಪಗಳ ಗುಂಡಿ ಮುಚ್ಚಿ ಮೇಲೆದ್ದು ಬರಲು ನಮಗೆ ಸಮಯ ಬೇಕು. ಎಲ್ಲ ವಿಚಾರಗಳಲ್ಲಿ ಸ್ವಾವಲಂಬನೆ ಸಾಧಿಸಲು ಮೋದಿ ಕಾರ್ಯಪ್ರವೃತರಾಗುತ್ತಿದ್ದಾರೆ. ಈ ಮೊದಲು ನಾವು ಡಿಫೆನ್ಸ್‌ನಲ್ಲಿ ನಾವು ಸ್ವಾವಲಂಬಿಗಳಾಗಿ ಇರಲಿಲ್ಲ, ಮದ್ದುಗುಂಡು ಆಚೆಯಿಂದ ಬರುತ್ತಿತ್ತು. ಇವತ್ತು ಭಾರತ ಸ್ವಾವಲಂಬನೆ ಕಡೆಗೆ ದಾಪುಗಾಲು ಇಡುತ್ತಿದೆ, ನಾವು ಬೇರೆ ದೇಶಕ್ಕೆ ರಪ್ತು ಮಾಡಲು ಯೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.