ಚಿಕ್ಕಮಗಳೂರು : ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿದ್ದ ʼಗೋ ಬ್ಯಾಕ್ʼ ಅಭಿಯಾನ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹಾಲಿ ಸಂಸದೆ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಅಸಮಾಧಾನ ರವಿವಾರ ಪಕ್ಷದ ಕಚೇರಿಯಲ್ಲೇ ಸ್ಪೋಟಗೊಂಡಿದ್ದು, ಪಕ್ಷದ ವರಿಷ್ಠರ ಸಮ್ಮುಖದಲ್ಲೇ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಧರಣಿ ನಡೆಸಿದ ಘಟನೆ ನಡೆಯಿತು.
ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ದಿಢೀರ್ ಧರಣಿ ನಡೆಸಿ ಸಭೆಯಲ್ಲಿದ್ದ ಪಕ್ಷದ ಹಲವು ಮುಖಂಡರನ್ನು ಮುಜುಗರಕ್ಕೀಡು ಮಾಡಿದ ಘಟನೆ ನಡೆಯಿತು.
ಬಿಜೆಪಿ ಕಚೇರಿಯಲ್ಲಿ ರವಿವಾರ ಪರಿಶಿಷ್ಟ ಪಂಗಡ ಗಳ ಮುನ್ನಡೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಆರಗ ಜ್ಞಾನೇಂದ್ರ, ಚುನಾವಣ ಉಸ್ತುವಾರಿ ಭಾನುಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮತ್ತಿತರ ನಾಯಕರು ಭಾಗವಹಿಸಿದ್ದರು.
ಸಭೆಯ ಮೊದಲು ಸಿ.ಟಿ.ರವಿ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವರು, ವರಿಷ್ಠರು ಮಾತು ಆರಂಭಿಸುತ್ತಿದ್ದಂತೆ ದಿಢೀರ್ ಆಗಿ “ಗೋ ಬ್ಯಾಕ್ ಶೋಭಾ’ ಘೋಷಣೆ ಕೂಗಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು. ಮಾಜಿ ಶಾಸಕ ಸಿ.ಟಿ.ರವಿ ಅವರಿಗೆ ಈ ಬಾರಿಯ ಲೋಕಸಭೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸಿ.ಟಿ. ರವಿ ಸಹಿತ ಹಲವು ಮುಖಂಡರು, ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸಭೆಯಲ್ಲಿ ಗೊಂದಲ ಏರ್ಪಟ್ಟಿದ್ದಲ್ಲದೆ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.