‘ಅವರೆಲ್ಲ ಮುಂದೆ ಪಶ್ಚತಾಪ ಪಡ್ತಾರೆ, ನನ್ನ ರಾಜಕೀಯ ನಡೆ ಏನೆಂದರೆ..’ -ಬೇಸರ ಹೊರ ಹಾಕಿದ ಸದಾನಂದ ಗೌಡ

ಬೆಂಗಳೂರು : ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ, ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಇದೇ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯುತ್ತೇನೆ ಎಂದ ಮೇಲೆ ಮತ್ತೆ ಚುನಾವಣಾ ಕಣಕ್ಕೆ ಇಳಿಯಬೇಕು ಎಂಬ ಒತ್ತಾಯ ಕೇಳಿಬಂತು. ಅದಾದ ನಂತರ ಮತ್ತೆ ಬೇರೆಯವರಿಗೆ ಟಿಕೆಟ್ ಘೋಷಣೆ ಆಯಿತು. ಆ ನಂತರ ನಾನು ಏನು ಮಾಡುತ್ತೇನೆ ಎಂಬ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು. ನನ್ನ ಕುರಿತ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸದಾನಂದಗೌಡಗೆ ಬೇಸರ ಆಗಿದೆಯೇ ಎಂಬ ಪ್ರಶ್ನೆ ಬಂದಿತ್ತು. ಇದಕ್ಕೆ ನನ್ನ ಉತ್ತರ ‘ಹೌದು’. ಎರಡನೇ ಪ್ರಶ್ನೆ ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ನಿಂದ ಆಹ್ವಾನ ಬಂದಿದೆಯೇ ಎಂಬುವುದಾಗಿತ್ತು. ಅದಕ್ಕೆ ನನ್ನ ಉತ್ತರ ‘ಹೌದು, ಆಹ್ವಾನ ಬಂದಿದೆ’. ಮೂರನೇಯ ಪ್ರಶ್ನೆಗೆ ನನ್ನ ಉತ್ತರ ‘ಕಾಂಗ್ರೆಸ್ಗೆ ಸೇರಲ್ಲ’. ಇನ್ನೊಂದು ಪ್ರಶ್ನೆ ನನ್ನ ರಾಜಕೀಯದ ಮುಂದಿನ ನಡೆಯ ಬಗ್ಗೆ ಆಗಿತ್ತು. ‘ನನ್ನ ಮುಂದಿನ ರಾಜಕೀಯ ನಡೆ ಕರ್ನಾಟಕ ಬಿಜೆಪಿ ಶುದ್ಧೀಕರಣದತ್ತ ನನ್ನ ಮುಂದಿನ ನಡಿಗೆ.

ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಎರಡ್ಮೂರು ಮಾಜಿ ಮಂತ್ರಿಗಳು ಬಂದು ನಿಮಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸದೇ ಅಪಮಾನ ಮಾಡಿದ್ದಾರಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದ್ದು, ಅದಕ್ಕೂ ನಾನು ಉತ್ತರ ನೀಡುತ್ತೇನೆ. ಮುಂದೊಂದು ದಿನ ಅವರೆಲ್ಲ ಪಶ್ಚಾತಾಪ ಪಡುತ್ತಾರೆ ಎಂದರು. ಅದೇ ರೀತಿ ಬೇರೆಬೇರೆ ಸಂಘಟನೆಗಳು ನಿಮ್ಮ ಬಳಿ ಬಂದು ಸಂಧಾನ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ನನ್ನ ಉತ್ತರ ಸಕಾರಾತ್ಮಕ ಸ್ಪಂದನೆ ಆಗಿದೆ ಎಂದಿದ್ದಾರೆ.

You cannot copy content from Baravanige News

Scroll to Top