ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ತಮ್ಮ ಮುಂದಿನ ರಾಜಕೀಯ ನಡೆ ಏನು ಅನ್ನೋ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.
ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿಯೇ ಮಾತನಾಡಿದ ಅವರು ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ. ಆದರೆ ಮಂಡ್ಯ ಬಿಟ್ಟು ನಾನು ಹೋಗಲ್ಲ. ಕಾಂಗ್ರೆಸ್ ಪಕ್ಷದ ಕಡೆ ಹೋಗುವುದಿಲ್ಲ ಎಂದು ಸುಮಲತಾ ಅಂಬರೀಶ್ ಗುಡುಗಿದ್ದಾರೆ.
ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನೀವು ಬೇರೆ ಯಾವುದೆ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಸ್ವತಃ ಪ್ರಧಾನಿ ಮೋದಿಯವರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್ಎಸ್ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು.
2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳೊಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.
ಸುಮಲತಾ ಅವಶ್ಯಕತೆ ನಮಗೆ ಬೇಕಿಲ್ಲ ಅಂತ ಕಾಂಗ್ರೆಸ್ನ ಪ್ರಮುಖ ನಾಯಕರು ಹೇಳಿದರು. ನನಗೆ ಗೌರವ ಇಲ್ಲದ ಕಡೆ ಹೋಗಿ ಎಂದು ಒತ್ತಾಯಿಸಬೇಡಿ. ನಾನು ಕಾಂಗ್ರೆಸ್ಗೆ ಹೋಗಲ್ಲ. ಕಾಂಗ್ರೆಸ್ನವರು ಬೇಡ ಎಂದಿದ್ದಾರೆ, ನಾನು ಹೋಗಲ್ಲ. ಕೇಂದ್ರ ಸರ್ಕಾರ ನಾಲ್ಕು ಸಾವಿರ ಕೋಟಿ ಅನುದಾನ ನೀಡಿದೆ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆಯುತ್ತಿದ್ದರು. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು ಎಂದು ತಿಳಿಸಿದ್ದಾರೆ.
ಸಂಸದೆ ಸ್ಥಾನ ಶಾಶ್ವತವಲ್ಲ. ಮತ್ತೊಬ್ಬರು ಸಂಸದರಾಗಿ ಬರುತ್ತಾರೆ. ಆದರೆ ನಾನು ಮಂಡ್ಯದ ಸೊಸೆಯಾಗಿ ಕೊನೆಯವರೆಗೂ ಉಳಿಯುತ್ತೇನೆ. ಬದಲಾದ ಪರಿಸ್ಥಿತಿ, ಸನ್ನಿವೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಠ ಸಾಧನೆ ಮಾಡುವ ಉದ್ದೇಶ ಇದ್ದರೇ ಪಕ್ಷೇತರ ಸ್ಪರ್ಧೆ ಮಾಡಬಹುದು. ಅದರಿಂದ ಯಾರಿಗೆ ಲಾಭ? ನನ್ನ ಸ್ವಾರ್ಥ ಏನು ಇಲ್ಲ, ಲಾಭಕ್ಕಾಗಿ ಯೋಚಿಸಿದರೇ ಬೇರೆ ಕ್ಷೇತ್ರ ಆಯ್ಕೆ ಮಾಡಬಹುದಿತ್ತು. ಬಂದ ಅವಕಾಶಗಳನ್ನು ಮಂಡ್ಯಕ್ಕಾಗಿ ಬಿಟ್ಟಿದ್ದೇನೆ. ರಾಜಕೀಯ ಮಾಡಿದರೇ ಮಂಡ್ಯದಲ್ಲಿ ಮಾತ್ರ ಅಂತ ನಿರ್ಧಾರ ಮಾಡಿದ್ದೇನೆ. ಅಸಂಖ್ಯಾತ ಅಂಬರೀಶ್ ಅಭಿಮಾನಿಗಳನ್ನ ಬಿಟ್ಟು ಹೋದರೆ ಮಂಡ್ಯ ಸೊಸೆ ಅನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.