ಬೆಂಗಳೂರು : ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್ ಅವರಿಗೂ ಸಹ ಮೇ 27ರಂದು ಖುದ್ದಾಗಿ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಮಾರ್ಚ್ 30ರಂದು ಕಟಪಾಡಿ ಖಾಸಗಿ ಕಾಲೇಜು ಆವರಣದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೇ ಪ್ರಚಾರ ಸಭೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು. ಇನ್ನು ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಮೇ 27ರಂದು ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಹೈಕಮಾಂಡ್ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪೂಜಾರಿ ಅವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಗೆಲುವಿಗಾಗಿ ಬಿಸಿಲು ಹಗಲು-ರಾತ್ರಿ ಎನ್ನದೇ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ. ಇದರ ಮಧ್ಯೆ ಇದೀಗ ಕೋರ್ಟ್ ಸಂಕಷ್ಟ ಎದುರಾಗಿದೆ.
ನೀತಿ ಸಂಹಿತೆ ಉಲ್ಲಂಘನೆ : ಶ್ರೀನಿವಾಸ ಪೂಜಾರಿಗೆ ಕೋರ್ಟ್ ಸಮನ್ಸ್
![](https://www.baravanige.com/wp-content/uploads/2024/04/IMG-20240405-WA0069-1024x662.jpg)