ಶಿರ್ವ, ಏ.08: ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಕುತ್ಯಾರು ಕೇಂಜ ಪರಿಸರದಲ್ಲಿ ಚಿರತೆ ಸಹಿತ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ರಸ್ತೆಯಲ್ಲಿ ನಡೆದಾಡುವ ಗ್ರಾಮಸ್ಥರು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ಪರಿಸರದ ಕಾಡಿನಲ್ಲಿ ಮೂರ್ನಾಲ್ಕು ಚಿರತೆಗಳಿದ್ದು ರಾತ್ರಿ ವೇಳೆ ತಿರುಗಾಡುತ್ತಿವೆ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಭಯಭೀತರಾಗಿದ್ದು,ವಾಹನ ಸವಾರರೋರ್ವರಿಗೆ ರಾತ್ರಿ ರಸ್ತೆಯಲ್ಲಿ ಅಡ್ಡಾಡುವ ಚಿರತೆ ಕಂಡುಬಂದಿದ್ದು, ಮೊಬೈಲ್ನಲ್ಲಿ ಕ್ಲಿಕ್ಕಿಸಿದ್ದಾರೆ.ಪರಿಸರದ ನಾಗರಿಕರ ಸಾಕು ಪ್ರಾಣಿಗಳು ಕೂಡಾ ಕಾಣೆಯಾಗುತ್ತಿದ್ದು ನಾಗರಿಕರನ್ನು ಭಯಭೀತರನ್ನಾಗಿಸಿದೆ.
ಮನೆಯಂಗಳದಲ್ಲಿ ಜಿಂಕೆ,ನವಿಲು:
ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರ ಒಡೆತನದ ಕಾಡಿನಲ್ಲಿ ಸುಮಾರು 15ಕ್ಕೂ ಮಿಕ್ಕಿ ಜಿಂಕೆ ಮತ್ತು ನವಿಲುಗಳಿದ್ದು, ಮೇವಿಗಾಗಿ ಕಾಡಿನಂಚಿನ ಅಡಕೆ ತೋಟದಲ್ಲಿ ಬೀಡು ಬಿಡುತ್ತಿವೆ. ಬಿಸಿಲಿನ ಬೇಗೆಗೆ ನೀರನ್ನು ಅರಸಿಕೊಂಡು ಮನೆಯಂಗಳಕ್ಕೆ ಲಗ್ಗೆ ಇಡುತ್ತಿವೆ. ನವಿಲಿನ ಹಾವಳಿಯೂ ವಿಪರೀತವಾಗಿದ್ದು,ಕೃಷಿಯನ್ನು ಹಾಳುಗೆಡವುತ್ತಿದೆ.
ರಸ್ತೆಯಲ್ಲಿ ಪ್ರತೀದಿನ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಗೆ ಕೆಲಸಕ್ಕೆ ಹೋಗುವ ಪರಿಸರದ ನಾಗರಿಕರು, ವಾಹನ ಸವಾರರು ಭಯಭೀತರಾಗಿದ್ದು, ಗ್ರಾ.ಪಂ. ಆಡಳಿತ ಮತ್ತು ಅರಣ್ಯ ಇಲಾಖೆ ಸಮಸ್ಯೆಗೆ ತುರ್ತು ಪರಿಹಾರ ಒದಗಿಸಬೇಕಾಗಿದೆ.
ಅಧಿಕಾರಿಗಳು ಕೂಡಲೇ ಸ್ಪಂದಿಸಿ:
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಪರಿಸರಕ್ಕೆ ಭೇಟಿ ನೀಡಿ,ಚಿರತೆ ಹಾವಳಿಗೆ ಬೋನು ಇರಿಸಿ ಹಾಗೂ ಜಿಂಕೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಂಡು ನಾಗರಿಕರು ನಿರ್ಭೀತಿಯಿಂದ ನಡೆದುಕೊಂಡು ಹೋಗಲು ಅನುವು ಮಾಡಿಕೊಡಬೇಕಾಗಿದೆ