ಚುನಾವಣೆಯಲ್ಲಿ ಯಾರ್‌ ಗೆಲ್ತಾರೆ..? ಭವಿಷ್ಯ ಹೇಳಿದ ಗಿಳಿ ಮಾಲೀಕನ ಬಂಧನ ; ಮುಂದೇನಾಯ್ತು..!?

ಚೆನ್ನೈ : ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಅಖಾಡದಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷದ ನಾಯಕರು, ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮತಯಾಚನೆಯ ಮಧ್ಯೆ ಯಾರ್ ಗೆಲ್ತಾರೆ..!? ಯಾರ್ ಸೋಲ್ತಾರೆ ಅನ್ನೋ ಕುತೂಹಲ ಜೋರಾಗಿದೆ. ಈ ರಾಜಕೀಯ ಲೆಕ್ಕಾಚಾರದ ಮಧ್ಯೆ ತಮಿಳುನಾಡಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.

ತಮಿಳುನಾಡಿನಲ್ಲಿ (ಪಟ್ಟಾಲಿ ಮಕ್ಕಳ್ ಕಚ್ಚಿ) ಪಕ್ಷದ ಚುನಾವಣಾ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಳಿಯೊಂದು ಭವಿಷ್ಯ ನುಡಿದಿದೆ.

ಗಿಳಿಮರಿ ಕೈಯಲ್ಲಿ ಭವಿಷ್ಯ ಹೇಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ನೋಡಿ ಚುನಾವಣೆಯ ಭವಿಷ್ಯ ಹೇಳಿಸಿದ ಗಿಳಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಪಿಎಂಕೆ ಪಕ್ಷದಿಂದ ಥಂಕರ್ ಬಚ್ಚನ್ ಅವರು ಸ್ಪರ್ಧಿಸಿದ್ದಾರೆ. ಇತ್ತೀಚೆಗೆ ಇವರು ಬೀದಿ ಬದಿಯಲ್ಲಿ ಗಿಳಿ ಶಾಸ್ತ್ರ ಕೇಳಿದ್ದರು. ಸೆಲ್ವರಾಜ್ ಎಂಬುವವರು ಗಿಳಿ ಕೈಯಲ್ಲಿ ಭವಿಷ್ಯ ಹೇಳಿಸಿ ಥಂಕರ್ ಬಚ್ಚನ್‌ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದಿದ್ದರು. ಪಿಎಂಕೆ ಪಕ್ಷದ ಥಂಕರ್ ಬಚ್ಚನ್ ಗಿಳಿ ಶಾಸ್ತ್ರ ಗೆಲ್ಲುತ್ತೇನೆ ಅನ್ನೋ ಭವಿಷ್ಯ ಕೇಳಿ ತುಂಬಾ ಖುಷಿಯಾದರು. ಗಿಳಿ ಮರಿಗೆ ಒಂದು ಬಾಳೆಹಣ್ಣನ್ನು ಕೊಟ್ಟು ಹೋಗಿದ್ದರು.

ಗಿಳಿ ಕೈಯಲ್ಲಿ ಸೆಲ್ವರಾಜ್ ಅವರು ಚುನಾವಣೆಯ ಭವಿಷ್ಯ ಹೇಳಿದ ಕೆಲವೇ ಗಂಟೆಯಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅರಣ್ಯಾಧಿಕಾರಿಗಳು ಸೆಲ್ವರಾಜ್ ಹಾಗೂ ಅವರ ಬಳಿ ಇದ್ದ ಗಿಳಿಯನ್ನು ವಶಕ್ಕೆ ಪಡೆದಿದ್ದಾರೆ. ಸೆಲ್ವರಾಜ್ ಅವರು ಗಿಳಿಮರಿಯನ್ನು ಪಂಜರದಲ್ಲಿಟ್ಟು ಗಿಳಿ ಶಾಸ್ತ್ರ ಹೇಳುತ್ತಾ ಜೀವನ ನಡೆಸುತ್ತಿದ್ದಾರೆ. ಇದೀಗ ಚುನಾವಣೆಯ ಸಮಯದಲ್ಲಿ ಭವಿಷ್ಯ ಹೇಳಿ ಆಪತ್ತಿಗೆ ಸಿಲುಕಿದ್ದಾರೆ. ಸೆಲ್ವರಾಜ್ ಜೊತೆಗಿದ್ದ ಆತನ ಸಹೋದರನನ್ನು ಬಂಧಿಸಲಾಗಿದೆ.

1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಪಕ್ಷಿಯನ್ನು ಪಂಜರದಲ್ಲಿಟ್ಟು ಬಳಸಿಕೊಳ್ಳುವಂತಿಲ್ಲ. ಈ ಕಾಯ್ದೆ ಉಲ್ಲಂಘಿಸಿದ ಆರೋಪದಲ್ಲಿ ಹಾಗೂ ಅಕ್ರಮವಾಗಿ ವನ್ಯಜೀವಿಯನ್ನು ಬಳಕೆ ಮಾಡಿದ ಹಿನ್ನೆಲೆಯಲ್ಲಿ ತಮಿಳುನಾಡು ಅರಣ್ಯ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗಿಳಿ ಶಾಸ್ತ್ರ ಹೇಳಿದ ಸೆಲ್ವರಾಜ್ ಅವರನ್ನು ಬಂಧಿಸಿದ ಬಳಿಕ ಎಚ್ಚರಿಕೆ ಕೊಟ್ಟು ಬಿಡುಗಡೆ ಮಾಡಿದ್ದಾರೆ.

You cannot copy content from Baravanige News

Scroll to Top