ಉಡುಪಿ: ನಾಳೆ ಶ್ರೀಕೃಷ್ಣನಿಗೆ ಸುವರ್ಣ ನಾಣ್ಯ ಅಭಿಷೇಕ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಸಂಭ್ರಮ ಪ್ರಯುಕ್ತ ಎ. 14ರಂದು ಶ್ರೀ ಕೃಷ್ಣನಿಗೆ ಸುವರ್ಣ ನಾಣ್ಯ ಅಭಿಷೇಕ, ಶ್ರೀಪಾದ ರಿಗೆ ಗೌರವಾರ್ಪಣೆ ನಡೆಯಲಿದೆ.

ಪುತ್ತಿಗೆ ಶ್ರೀಪಾದರ ನಾಲ್ಕನೇ ಪರ್ಯಾಯದ ಮಹತ್ವಾಕಾಂಕ್ಷೆಯ ಯೋಜನೆಯಾದ “ಕೋಟಿಗೀತಾ ಲೇಖನ ಯಜ್ಞ’ದ ಸ್ಮರಣಾರ್ಥ ಶ್ರೀಕೃಷ್ಣನಿಗೆ “ಪಾರ್ಥ ಸಾರಥಿ ಸುವರ್ಣ ರಥ’ವನ್ನು 18 ಕೋ.ರೂ. ವೆಚ್ಚದಲ್ಲಿ ಸಮರ್ಪಿಸಲು ಸಂಕಲ್ಪಿಸಿದ್ದು, ಯೋಜನೆಯ ಪ್ರಾರಂಭ ಮುಹೂರ್ತವೂ ಇದೇ ಸಂದರ್ಭ ಜರಗಲಿದೆ.
ರಾಜಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಹೆ ವಿ.ವಿ. ಸಹ ಕುಲಾಧಿಪತಿ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್‌ ಮುಧೋಳ್‌, ಯುಪಿಸಿಎಲ್‌ ಉಡುಪಿ ಪ್ರಾದೇಶಿಕ ನಿರ್ದೇಶಕ ಕಿಶೋರ್‌ ಆಳ್ವ, ಕರಾವಳಿ ಗ್ರೂಪ್‌ ಆಫ್ ಕಾಲೇಜ್‌ನ ನಿರ್ದೇಶಕ ಗಣೇಶ್‌ ರಾವ್‌, ನಂದಿಕೂರಿನ ಪ್ರಾಜ್‌ ಇಂಡಸ್ಟ್ರೀಸ್‌ನ ಅಶೋಕ್‌ ಶೆಟ್ಟಿ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಂಜ ಶ್ರೀಧರ ತಂತ್ರಿ, ಬ್ರಹ್ಮಾವರ ರೋಟರಿ ನಿಯೋಜಿತ ಗವರ್ನರ್‌ ಬಿ.ಎಂ. ಭಟ್‌, ಆ್ಯಕ್ಸಿಸ್‌ ಬ್ಯಾಂಕಿನ ಉಪಾಧ್ಯಕ್ಷ ಸುರೇಶ್‌ ರಾವ್‌, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನದ ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಾರ್ಥಕ ಸನ್ಯಾಸತ್ವಕ್ಕೆ ಸುವರ್ಣ ಸಂಭ್ರಮ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ 1974ರ ಎ. 8ರಂದು 12ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕಾರ, 2024ರ ಎಪ್ರಿಲ್‌ನಲ್ಲಿ ಸನ್ಯಾಸ ಸ್ವೀಕಾರದ ಸುವರ್ಣ ಸಂಭ್ರಮಾಚರಣೆ. ಸಮಾಜದ ಗಣ್ಯರಿಂದ 108 ಚಿನ್ನದ ನಾಣ್ಯಗಳ ಸಮರ್ಪಣೆ ಹಾಗೂ ಶ್ರೀಪಾದರಿಗೆ ಪುಷ್ಪಾರ್ಚನೆ ನೆರವೇರಲಿದೆ.

Scroll to Top