ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಗೆ ತೆರಳಿ ಮತದಾನ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.
ಜಿಲ್ಲಾ ಚುನವಾಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದರು.
ಉಡುಪಿ ಜಿಲ್ಲೆಯ ಕಾಪು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,474 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ತರೀಕೆರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,626 ಮಂದಿ ಮನೆಯಿಂದಲೇ ಮತದಾನದ ಆಯ್ಕೆ ಪಡೆದುಕೊಂಡಿದ್ದಾರೆ.
ನಿರ್ದಿಷ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನಿಯೋಜಿಸಿರುವ ತಂಡವು ಸಂಬಂಧಪಟ್ಟ ಮತದಾರರ ಮನೆಗೆ ಹೋಗಿ ಮತದಾನ ಪಡೆಯಲಿದೆ. ಮನೆಯಲ್ಲಿ ಮತದಾನದ ಅವಕಾಶ ಪಡೆದ ಮತದಾರರು ಆ ದಿನದಂದು ಮನೆಯಲ್ಲಿದ್ದು ಮತದಾನ ಮಾಡಬೇಕು. ಮನೆಯಿಂದಲೇ ಮತದಾನ ಮಾಡುವ ಆಯ್ಕೆ ಪಡೆದು ಹಕ್ಕು ಚಲಾಯಿಸದಿದ್ದವರು ಸಾರ್ವತ್ರಿಕ ಮತದಾನದ ದಿನದಂದು ಬೂತ್‌ಗೆ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ಕ್ಷೇತ್ರದಾದ್ಯಂತ ಪ್ರಕ್ರಿಯೆ ಆರಂಭವಾಗಿದೆ. ಎ. 18ರೊಳಗೆ ಈ ಪ್ರಕ್ರಿಯೆ ಮುಗಿಸಬೇಕಿರುವುದರಿಂದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಪ್ರತ್ಯೇಕ ತಂಡ ರಚನೆ ಮಾಡಲಿದ್ದೇವೆ. ಒಂದೊಂದು ಕ್ಷೇತ್ರದಲ್ಲಿ ಮೂರು ದಿನ ಈ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದರು.