ಉಡುಪಿ : ಲೋಕಸಭಾ ಚುನಾವಣೆ ಹಿನ್ನೆಲೆ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ನಗದು, ಮದ್ಯ, ಡ್ರಗ್ಸ್ ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಾರ್ಚ್ 1 ರಂದು ನೀತಿ ಸಂಹಿತೆ ಜಾರಿಯಾಗಿದ್ದು, ಆ ದಿನದಿಂದ ಹಿಡಿದು ಏ. 13 ರವರೆಗೆ ವಶಕ್ಕೆ ಪಡೆಯಲಾದ ವಸ್ತುಗಳ ವಿವರನ್ನು ಚುನಾವಣಾ ಆಯೋಗ ಬಹಿರಂಗ ಪಡಿಸಿದೆ. ದೇಶದ 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ಆಯೋಗ ವಶಕ್ಕೆ ಪಡೆದಿದೆ ಎಂದು ತಿಳಿಸಿದೆ.
ಈ ಬಾರಿ ಚುನಾವಣೆಗೂ ಮುನ್ನ 395.39 ಕೋಟಿ ರೂ. ಮೌಲ್ಯದ ನಗದು, 489.31 ಕೋಟಿ ರೂ.(35,829,924.75 ಲೀ.) ಮೌಲ್ಯದ ಮದ್ಯ, 2,068 ಕೋಟಿ ರೂ. ಮೌಲ್ಯದ ಡ್ರಗ್ಸ್, 562.10 ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹ, 1,142.49 ಕೋಟಿ ರೂ. ಮೌಲ್ಯದ ಉಡುಗೊರೆ ಇತ್ಯಾದಿ ಹೀಗೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿದೆ. ಇನ್ನು ಆಯೋಗ ವಶಕ್ಕೆ ಪಡೆದ ವಸ್ತುಗಳ ಪೈಕಿ ಕರ್ನಾಟಕದಿಂದ 35.53 ಕೋಟಿ ರೂ ನಗದು, 1.30 ಕೋಟಿ ರೂ. ಮೌಲ್ಯದ ಮದ್ಯ ಒಳಗೊಂಡಿದೆ.