ಉಡುಪಿ: ರಾಜ್ಯಾದ್ಯಂತ ಕಾಲರಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಸ್ಥಳಿಯಾಡಳಿತಕ್ಕೆ ಸೂಚನೆ ನೀಡಿದ್ದರೂ ಬೀದಿಬದಿ ತೆರೆದ ಸ್ಥಿತಿಯಲ್ಲಿ ವಸ್ತುಗಳ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.
ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ಕೇಂದ್ರೀಕರಿಸಿಕೊಂಡು ಜಾಗೃತಿ ಮೂಡಿಸಬೇಕು. ನೀರಿನಿಂದ ತಯಾರಿಸುವ ಐಸ್ ಕ್ಯಾಂಡಿಗಳು, ರಸ್ತೆ ಬದಿ ಮಾರಾಟ ಮಾಡುವ ಆಹಾರ ಹಾಗೂ ಪಾನೀಯಗಳು, ಮಾನವ ತ್ಯಾಜ್ಯಗಳನ್ನೊಳಗೊಂಡಿರುವ ನೀರಿನಿಂದ ಬೆಳೆದ ತರಕಾರಿಗಳು, ಕಲುಷಿತಗೊಂಡ ನೀರಿನಲ್ಲಿ ಸಿಕ್ಕಿರುವ ಮೀನುಗಳ ಸೇವನೆ ಸಂದರ್ಭ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸ್ಥಳೀಯವಾಗಿ ಜಾಗೃತಿ ಮೂಡಿಸುವಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಸೂಚನೆ ನೀಡಿತ್ತು.
ತೆರೆದ ಸ್ಥಿತಿಯಲ್ಲಿ ವಸ್ತುಗಳ ಮಾರಾಟ
ಬೀದಿ ಬದಿ, ಧಾರ್ಮಿಕ ಕೇಂದ್ರಗಳ ಆಸುಪಾಸು ಹಾಗೂ ಜನದಟ್ಟಣೆ ಇರುವಂತಹ ಸ್ಥಳಗಳಲ್ಲಿ ಜನರನ್ನು ಸೆಳೆಯುವ ಉದ್ದೇಶದಿಂದ ವ್ಯಾಪಾರಸ್ಥರು ಹಣ್ಣುಗಳನ್ನು ತುಂಡರಿಸಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ ಸಿಹಿತಿನಿಸುಗಳನ್ನು ಕೂಡ ತೆರೆದ ಸ್ಥಿತಿಯಲ್ಲಿ ಮಾರಲಾಗುತ್ತಿದೆ. ಧೂಳು, ನೊಣ ಸಹಿತ ಕ್ರಿಮಿ ಕೀಟಗಳು ಇದರಲ್ಲಿ ಸೇರುವ ಕಾರಣ ಕಾಯಿಲೆ ಹಬ್ಬುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಈ ಬಗ್ಗೆ ವ್ಯಾಪಾರಸ್ಥರು ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ.
ವಲಸೆ ಕಾರ್ಮಿಕರ ಬಗ್ಗೆ ನಿಗಾ
ಉಡುಪಿ ನಗರದ ಸಿಟಿ ಬಸ್ ತಂಗುದಾಣ, ಸರ್ವಿಸ್ ಬಸ್ ತಂಗುದಾಣ, ಬೀಡಿನಗುಡ್ಡೆಯ ಬಳಿ ಸಹಿತ ವಲಸೆ ಕಾರ್ಮಿಕರು ಹೆಚ್ಚಿರುವ ಭಾಗದಲ್ಲಿ ಅಂಗಡಿಗಳು ಸ್ವತ್ಛತೆ ನಿಯಮಾವಳಿಗಳನ್ನೇ ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ. ಸ್ವತ್ಛವಿಲ್ಲದ ನೀರು ಬಳಕೆ ಮಾಡುವುದು, ವರ್ಷಾನುಗಟ್ಟಲೆ ಬಳಕೆ ಮಾಡುವ ಅಡುಗೆ ಎಣ್ಣೆ ಸಹಿತ ಕರಿದ ತಿಂಡಿಗಳನ್ನು ತೆರೆದ ಸ್ಥಿತಿಯಲ್ಲಿ ಮಾರಾಟ ಮಾಡುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿವೆ.
ಸೂಚನೆ ಪಾಲಿಸಿ
ಬೇಸಗೆ ಬಿಸಿಲಿಗೆ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಪಾಲಿಸಬೇಕು. ಆಹಾರ ಸೇವನೆ ಸಂದರ್ಭದಲ್ಲಿಯೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗುವುದು ಉತ್ತಮ ಎನ್ನುತ್ತಾರೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು.
ಬಿಸಿಲಿನ ಬೇಗೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಆರೋಗ್ಯ ಇಲಾಖೆ ವತಿಯಿಂದ ಈಗಾಗಲೇ ಸ್ಥಳಿಯಾಡಳಿತಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ಈ ಬಗ್ಗೆ ಎಚ್ಚರ ವಹಿಸಬೇಕು.