ಪುತ್ತೂರು, ಏ 18: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಕಾಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್(48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದಾಗ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು ೫೦ ಮೀಟರ್ ದೂರದ ತನಕ ಬೈಕನ್ನು ಎಳೆದುಕೊಂಡು ಹೋಗಿದೆ. ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಲೊಕೇಶ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.