ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ : ಮೊದಲ ಮಳೆಯ ಆವಾಂತರ ; ರಸ್ತೆ ಕೆಸರುಮಯ

ಶಿರ್ವ : ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಪಂಜಿಮಾರು ಬಸ್‌ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ರಸ್ತೆ ಎತ್ತರಿಸಿ ಮೋರಿ ಕಾಮಗಾರಿ ನಡೆಯುತ್ತಿದ್ದು ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿ ಜಾರುತ್ತಿದ್ದು, ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಕೋಡು-ಪಂಜಿಮಾರು ತಿರುವಿನ ಇಳಿಜಾರಿನ ರಸ್ತೆಯಲ್ಲಿ ಮೋರಿ ನಿರ್ಮಿಸಿ ರಸ್ತೆ ಎತ್ತರಿಸಲು ಮೋರಿಯ ಇಕ್ಕೆಲದಲ್ಲಿ ಮಣ್ಣು ತುಂಬಿಸಲಾಗಿತ್ತು. ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿ ಆವಾಂತರ ಸೃಷ್ಠಿಯಾಗಿದೆ. ಬೆಳ್ಳಂಬೆಳಗ್ಗೆ ರಸ್ತೆಯ ಕೆಸರಿನಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು  ಗಾಯಗೊಂಡಿದ್ದಾರೆ. ರಸ್ತೆ ಕೆಸರುಮಯವಾಗಿ ಜಾರುತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಚಲಿಸುವಂತಾಗಿದೆ. ರಸ್ತೆಯ ಒಂದು ಮಗ್ಗುಲಿನ ಮಣ್ಣು ಕುಸಿದಿದ್ದು, ಬಬ್ಬರ್ಯ ದೈವಸ್ಥಾನದ ಕಡೆಗೆ ಹೋಗುವ ನಾಗರಿಕರಿಗೆ ದಾರಿಯೇ ಇಲ್ಲದಂತಾಗಿದೆ.


ರಸ್ತೆ ವಿಸ್ತರಣೆ ಕಾಮಗಾರಿ ನಡೆದು ತಿರುವು ರಸ್ತೆ ನೇರವಾಗಿ ಸುವ್ಯವಸ್ಥಿತ ರಸ್ತೆಯಾಗುವ ಮೊದಲೇ ಮಳೆ ಅವಾಂತರ ಸೃಷ್ಠಿ ಮಾಡಿದೆ. ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರರು ವಾಹನ ನಿಬಿಡತೆಯಿಂದ ಕೂಡಿರುವ ಈ ರಸ್ತೆಯನ್ನು ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡಬೇಕೆಂಬುದು  ನಾಗರಿಕರ ಒತ್ತಾಯಿಸುತ್ತಿದ್ದಾರೆ.

Scroll to Top