ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ : ಸೆರೆ

ಬ್ರಹ್ಮಾವರ : ಲಾರಿಯಲ್ಲಿ ಲೋಡ್‌ ಮಾಡಿ ಬ್ರಹ್ಮಾವರದಿಂದ ಗುಜರಾತ್‌ಗೆ ಕಳುಹಿಸಲಾದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿಯನ್ನು ಸಂಬಂಧಪಟ್ಟವರಿಗೆ ತಲುಪಿಸದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಮಹೇಂದ್ರಪುರಿ ಲಾಲ್‌ಪುರಿ ಗುಸ್ಸಾಯಿ ಬಂಧಿತ ಆರೋಪಿ. ಮಹಾ ರಾಷ್ಟ್ರದ ವಿರಾರ್‌ ಮತ್ತು ಗನ್‌ಸೋಲಿ ಎಂಬಲ್ಲಿಂದ ಗೋಂಡಬಿ ತುಂಬಿದ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಬಂಧಿತನಿಂದ ಟ್ರಕ್‌ ಸಹಿತ ಒಟ್ಟು 88,37,430 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬನ್ನಂಜೆಯ ಮೋಹನದಾಸ್‌ ಮಾಲಕತ್ವದ ಮೂಡುಗುಡ್ಡೆಯ ಶ್ರೀ ಕೃಷ್ಣ ಕ್ಯಾಶ್ಯೂ ಫ್ಯಾಕ್ಟರಿಯಿಂದ ಎ. 2ರಂದು ಮೊದನ್‌ ಮೋಸಿನ್‌ ಅವರ ಲಾರಿಯಲ್ಲಿ ಗೋಡಂಬಿಯನ್ನು ಸೂರತ್‌ನ ಟ್ರೇಡರ್ಗೆ 21.24 ಟನ್‌ ಹಾಗೂ ಅಲಹಾಬಾದ್‌ನ ಟ್ರೇಡರ್ಗೆ 3.450 ಟನ್‌ ಲೋಡ್‌ ಮಾಡಿ ಲಾರಿಯ ಚಾಲಕ ರಂಜಾನ್‌ ಸೋದ ಮತ್ತು ಮಹೇಂದ್ರಪುರಿ ಲಾಲ್‌ಪುರಿ ಗುಸ್ಸಾಯಿ ಜತೆಯಲ್ಲಿ ಸೂರತ್‌ಗೆ ಕಳುಹಿಸಲಾಗಿತ್ತು. ಆದರೆ ಅವರು ಅಲ್ಲಿಗೆ ಹೋಗದೆ 1,21,76,598 ರೂ. ಮೌಲ್ಯದ 24.69 ಮೆಟ್ರಿಕ್‌ ಟನ್‌ ಗೋಡಂಬಿ ಹಾಗೂ ಲಾರಿಯೊಂದಿಗೆ ನಾಪತ್ತೆಯಾಗಿದ್ದರು.
ಉಡುಪಿ ಎಸ್ಪಿ ಡಾ| ಅರುಣ್‌ ಕೆ. ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌, ಎಸ್ಸೆ„ ಪವನ್‌ ನಾಯಕ್‌, ಸಿಬಂದಿ ಕೃಷ್ಣಪ್ರಸಾದ್‌, ಜೀವನ್‌, ಜಿಲ್ಲಾ ಪೊಲೀಸ್‌ ಕಚೇರಿಯ ತಾಂತ್ರಿಕ ವಿಭಾಗದ ಸಿಬಂದಿ ದಿನೇಶ್‌ ನಾಯ್ಕ, ನಿತಿನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Scroll to Top