ಲೋಕಸಭಾ ಚುನಾವಣೆ : ರವಿವಾರ ಎರಡೂ ಪಕ್ಷಗಳಿಂದ ಬಿರುಸಿನ ಮನೆ ಮನೆ ಪ್ರಚಾರ

ಉಡುಪಿ : ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮನೆ ಮನೆ ಪ್ರಚಾರ ರವಿವಾರ ಬಿರುಸಾಗಿ ನಡೆದಿದೆ.

ಎ. 26ರಂದು ಮತದಾನ ನಡೆಯಲಿದ್ದು, ಎ. 24ರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಚುನಾವಣೆಗೂ ಮೊದಲು ಸಿಕ್ಕಿರುವ ಕೊನೆಯ ರವಿವಾರ ಇದಾಗಿದ್ದರಿಂದ ಎರಡು ಪಕ್ಷದವರು ಪ್ರತೀ ಬೂತ್‌ಗಳಲ್ಲೂ ಮನೆ ಮನೆ ಭೇಟಿಗೆ ಆದ್ಯತೆ ನೀಡಿದ್ದಾರೆ.

ಬಿಜೆಪಿ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಕಳೆದ 10 ವರ್ಷದ ಸಾಧನೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು. ಬೆಳಗ್ಗಿನಿಂದ ಸಂಜೆಯವರೆಗೂ ಮಹಾ ಅಭಿಯಾನದ ರೀತಿಯಲ್ಲಿ ಬಿಜೆಪಿ ಪ್ರಚಾರ ನಡೆಸಿದೆ. ಬಿಜೆಪಿ ಅಭ್ಯರ್ಥಿಯೂ ಉಡುಪಿ ಭಾಗದಲ್ಲಿ ಮನೆ ಮನೆ ಪ್ರಚಾರದಲ್ಲಿ ಕಾರ್ಯ ಕರ್ತರ ಜತೆಗೆ ಹೆಜ್ಜೆ ಹಾಕಿದರು.


ಕಾಂಗ್ರೆಸ್‌ ಕೂಡ ಮನೆ ಮನೆ ಪ್ರಚಾರ ಪ್ರಕ್ರಿಯೆ ಚುರುಕುಗೊಳಿಸಿದೆ. ಜಿಲ್ಲಾ ಪ್ರಮುಖರು, ಬ್ಲಾಕ್‌ ಪ್ರಮುಖರು ರವಿವಾರ ಬೆಳಗ್ಗೆ ಕಾಂಗ್ರೆಸ್‌ ಭವನದಲ್ಲಿ ಸೇರಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಚೊಂಬು ಪ್ರದರ್ಶಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಅನಂತರ ಮನೆ ಮನೆಗೆ ಭೇಟಿ ನೀಡಿದರು.

ಮನೆ ಮನೆಗೆ ಹೋಗಿ ಮತಯಾಚನೆ ಮಾಡುವ ಸಂದರ್ಭ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಅನುಕೂಲ ಹಾಗೂ ಇದೀಗ ಪ್ರಣಾಳಿಕೆಯಲ್ಲಿ ಘೋಷಿಸಿರುವ ಹಲವು ಅಂಶಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯು ಚಿಕ್ಕಮಗಳೂರು ಭಾಗದಲ್ಲಿ ರವಿವಾರ ಮತಯಾಚನೆ ನಡೆಸಿದರು.

ರವಿವಾರ ರಜೆ ಇರುವುದರಿಂದ ಎಲ್ಲರೂ ಮನೆಯಲ್ಲಿ ಇರುವ ಲಾಭ ಪಡೆದು ಎರಡು ಪಕ್ಷದವರು ಮನೆ ಮನೆ ಭೇಟಿ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದ್ದಾರೆ.


ಮನೆ ಮನೆ ಪ್ರಚಾರದ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರಿಗೆ ಭಿನ್ನ ಅನುಭವಗಳು ಎದುರಾಗಿವೆ. ಕೆಲವು ಪ್ರದೇಶದಲ್ಲಿ ಬಿಜೆಪಿಗರಿಗೆ ಮತದಾರರಿಂದ ಬೈಗುಳ ಸಿಕ್ಕರೆ, ಇನ್ನು ಕೆಲವು ಕಡೆ ಕಾಂಗ್ರೆಸಿಗರಿಗೆ ಮತದಾರರಿಂದ ಬೈಗುಳ ಸಿಕ್ಕಿದೆ. ಮತ್ತೆ ಕೆಲವೆಡೆ ಎರಡೂ ಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡಿರುವ ಮತದಾರರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ನೀವುಗಳು ಚುನಾವಣೆ ಮುಗಿದ ಅನಂತರ ನಮ್ಮ ಸಮಸ್ಯೆಗಳನ್ನು ಕೇಳುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ.

Scroll to Top