ಕೋಟ : ಕೇರಳದಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಮಹಮ್ಮದ್ ಇರ್ಫಾನ್‌ನನ್ನು ಬ್ರಹ್ಮಾವರ ತಾಲೂಕು ಕೋಟ ಮೂರ್ಕೈಯಲ್ಲಿ ಕೋಟ ಪೊಲೀಸರು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದರು.
ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ ಎನ್ನುವುದರ ಜೊತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ.
ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದ. ಸಿನೆಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರ ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ, ಒಮ್ಮೆ ಕಣ್ಣಿಟ್ಟರೆ ಎಷ್ಟೇ ದಿನವಾದರು ಕಾದು ತನ್ನ ಕೈಚಳಕ ತೋರುತ್ತಿದ್ದ, ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈತನ ಹಿನ್ನೆಲೆ ಅತ್ಯಂತ ಕೌತುಕವಾಗಿದೆ. ತನ್ನ 22ನೇ ವಯಸ್ಸಿನಲ್ಲೇ ಕಳ್ಳತನ ಆರಂಭಿಸಿದ ಈತ ಪ್ರಥಮವಾಗಿ ತನ್ನ ತಂಗಿಯ ಮದುವೆಯ ಖರ್ಚಿಗೆಂದು ಕಳ್ಳತನ ಮಾಡಿದ್ದನಂತೆ. ಅನಂತರ ಪ್ರತೀ ಬಾರಿ ಲಪಟಾಯಿಸಿದ ಹಣದಲ್ಲಿ ತನಗೆ ಸ್ವಲ್ಪವನ್ನೇ ಇರಿಸಿಕೊಂಡು ಹೆಚ್ಚಿನ ಮೊತ್ತವನ್ನು ಊರಿನವರ ಮದುವೆ, ಆರೋಗ್ಯದ ಸಮಸ್ಯೆ ಮತ್ತು ರಸ್ತೆ ಮುಂತಾದ ಊರಿನ ಅಭಿವೃದ್ಧಿಗೆ ಹಂಚುತ್ತಿದ್ದನಂತೆ. ಹೀಗಾಗಿ ಊರಿನವರು ಈತನನ್ನು ಖ್ಯಾತ ಸಮಾಜ ಸೇವಕ ರೋಬಿನ್‌ಹುಡ್ ಹೆಸರಲ್ಲಿ ಗುರುತಿಸುತ್ತಿದ್ದರಂತೆ.
ಊರಿನವರಿಗೆ ಈತನ ಮೇಲೆ ಸಾಕಷ್ಟು ಪ್ರೀತಿ ಇರುವುದರಿಂದ ಈತನ ಪತ್ನಿ ಜಿ.ಪಂ. ಸದಸ್ಯೆಯಾಗಿ ಕೂಡ ಆಯ್ಕೆಯಾಗಿದ್ದಳು ಹಾಗೂ ಈತ ಎಷ್ಟೇ ಬಾರಿ ಪೊಲೀಸರ ಅತಿಥಿಯಾದರು ಊರಿನವರೇ ಮುಂದೆ ನಿಂತು ಜೈಲ್‌ನಿಂದ ಹೊರತರುತ್ತಿದ್ದರು ಎನ್ನುವುದು ಕುತೂಹಲದ ವಿಷಯವಾಗಿದೆ. ಕರ್ನಾಟಕ, ಕೇರಳ, ಗೋವಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳೇ ಈತನ ಗುರಿ ಆಗಿದ್ದವು. ಯಾಕೆಂದರೆ ಇಲ್ಲಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಬಳಸುತ್ತಾರೆ ಎಂದಿದ್ದಾನೆ.
ಪೊಲೀಸರು ಈತನ ವಿಚಾರಣೆ ಗಿಳಿದಾಗ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್ ಇರ್ಫಾನ್‌ರೋಬಿನ್‌ಹುಡ್ ಎಂದು ಸರ್ಚ್ ಮಾಡಿ ಎಂದಿದ್ದನಂತೆ. ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳಿದ್ದು ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಅವೆಲ್ಲವನ್ನು ನೋಡಿದ ಪೊಲೀಸರಿಗೆ ಆಶ್ಚರ್ಯವಾಗಿದೆ.