ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ 405 ಸೂಕ್ಷ್ಮ ಮತಗಟ್ಟೆ: ಕೆ.ವಿದ್ಯಾಕುಮಾರಿ

ಮಣಿಪಾಲ: ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 405 ಸೂಕ್ಷ್ಮ ಮತಗಟ್ಟೆಗಳಿದ್ದು, ಅವುಗಳಲ್ಲಿ 203 ಉಡುಪಿ, 202 ಚಿಕ್ಕಮಗಳೂರಿನಲ್ಲಿದೆ. ಈ ಎಲ್ಲ ಮತಗಟ್ಟೆಗೂ ಸಿಎಪಿಎಫ್ ಸಿಬಂದಿ ನಿಯೋಜನೆ ಮಾಡಲಾಗಿದೆ. ಹಾಗೆಯೇ 1270 ಮತಗಳಿಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಎಲ್ಲ ಚಟುವಟಿಕೆಗಳನ್ನು ಆಯೋಗದ ದಿಲ್ಲಿ ಮತ್ತು ಬೆಂಗಳೂರಿನ ಕಚೇರಿಯಲ್ಲಿ ಪರಿವೀಕ್ಷಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನೇಜಾರು, ಹಾಲಾಡಿ ಮತ್ತು ಕುಂದಾಪುರದಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. 1,270 ಮತಗಟ್ಟೆಗಳಿಗೆ ಸಿಎಪಿಎಫ್, 459 ಮತಗಟ್ಟೆಗಳಲ್ಲಿ ಮೈಕ್ರೋ ಅಬ್‌ಜರ್ವರ್‌, 18 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಶೇ. 97ರಷ್ಟು ಮನೆಗಳಿಗೆ ಮತಗಟ್ಟೆ ಚೀಟಿ ವಿತರಿಸಲಾಗಿದೆ. ಮೊಬೈಲ್‌ ಮೂಲಕ ಮತಗಟ್ಟೆ ಚೀಟಿ ಪಡೆಯಲು ಅವಕಾಶವಿದ್ದರೂ ಮತಗಟ್ಟೆ ಯೊಳಗೆ ಮೊಬೈಲ್‌ ಕೊಂಡೊಯ್ಯಲು ಅವಕಾಶ ಇಲ್ಲದೇ ಇರುವುದರಿಂದ ಮತಗಟ್ಟೆ ಚೀಟಿ ಆವಶ್ಯವಾಗಿದೆ. ಪಿಆರ್‌ಒ, ಎಪಿಆರ್‌ಒ, ಪಿಒ ಸೇರಿದಂತೆ 4120 ಅಧಿಕಾರಿ/ ಸಿಬಂದಿ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್‌ ರೂಂಗಳಿಗೂ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಎ. 24ರ ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಎ. 25ರಂದು 5 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರಿ ಮನೆ ಮನೆ ಪ್ರಚಾರ ಮಾಡುವಂತಿಲ್ಲ ಎಂದರು.

ಮಸ್ಟರಿಂಗ್‌ ಪ್ರಕ್ರಿಯೆಗಳು ಎ. 25ರ ಬೆಳಗ್ಗೆ ಆರಂಭವಾಗಲಿದೆ. ಮಧ್ಯಾಹ್ನ ಊಟ ಪೂರೈಸಿ ಸಿಬಂದಿ ವರ್ಗ ಮತಯಂತ್ರದೊಂದಿಗೆ ತಮ್ಮ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಎಲ್ಲಾ ವಾಹನಗಳಿಗೂ ಜಿಪಿಎಸ್‌ ಅಳವಡಿಸಲಾಗಿದೆ. 260 ಬಸ್‌ ಹಾಗೂ ಸಾಮಾನ್ಯ ವಾಹನದ ಜತೆಗೆ 162 ಸೆಕ್ಟರ್‌ ಅಧಿಕಾರಿಗಳ ವಾಹನ ಇರಲಿದೆ. ಇದರಲ್ಲೂ ಒಂದೊಂದು ಹೆಚ್ಚುವರಿ ಮತಯಂತ್ರ ಇರಲಿದೆ. ಚುನಾವಣೆ ಮುಗಿದ ದಿನವೇ ಉಡುಪಿಯ ಎಲ್ಲ ಮತಯಂತ್ರಗಳೊಂದಿಗೆ ಸಿಬಂದಿ/ ಅಧಿಕಾರಿ ಮಸ್ಟರಿಂಗ್‌ ಕೇಂದ್ರಕ್ಕೆ ಬರಲಿದ್ದಾರೆ. ಚಿಕ್ಕಮಗಳೂರಿನ ಎಲ್ಲ ಮತಯಂತ್ರವು ಮಾರನೇ ದಿನ ಬರಲಿದೆ ಎಂದು ಹೇಳಿದರು.

ಅಕ್ರಮ ಮದ್ಯ, ನಗದು ವಶ
ಈವರೆಗೂ 94.67 ಲಕ್ಷ ಮೌಲ್ಯದ ಮದ್ಯ, 1.10 ಲಕ್ಷ ಮೌಲ್ಯದ ಡ್ರಗ್ಸ್‌, ಟಿ-ಶರ್ಟ್‌, ಪ್ಯಾಂಟ್‌, ಸಾðéಪ್‌ ಟೂಲ್‌ ಸೇರಿ 3.68 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 14.92 ಲಕ್ಷ ರೂ. ಮೌಲ್ಯದ ನಗದನ್ನು ಹೆಜಮಾಡಿ ಹಾಗೂ ಶೀರೂರು ಚೆಕ್‌ಪೋಸ್ಟ್‌ ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಸ್‌ ಯಾನ ದರ ಇಳಿಸಲು ಮನವಿ
ಚುನಾವಣೆ ದಿನದಂದು ಅನೇಕರು ಊರಿಗೆ ಬರುವವರು ಇರುವುದರಿಂದ ಏಕಾಏಕಿ ಬಸ್‌ ದರ ಹೆಚ್ಚಿರುವುದರಿಂದ ಅನೇಕರು ಬಾರದೇ ಇರಬಹುದು. ಇದರಿಂದ ಮತದಾನ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮತದಾನಕ್ಕೆ ಬರುವವರ ಅನುಕೂಲಕ್ಕಾಗಿ ಬಸ್‌ ದರ ಹೆಚ್ಚಳ ಮಾಡದಂತೆ ಕರಾವಳಿಯ ಲಾಂಗ್‌ ರೂಟ್‌ (ವಿಶೇಷವಾಗಿ ಬೆಂಗಳೂರು-ಉಡುಪಿ) ಬಸ್‌ ಮಾಲಕರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

ಉಡುಪಿಯಲ್ಲಿ ಶಾಲೆ ಬಸ್‌ ಬಳಕೆ
ಚುನಾವಣೆಯಂದು ಜಿಲ್ಲೆಯಲ್ಲಿ ಸರಕಾರಿ ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಎಲ್ಲ ರೂಟ್‌ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಈ ಬಾರಿ ಚುನಾವಣ ಕಾರ್ಯಕ್ಕೆ ಬಹುತೇಕ ಶಾಲಾ ಬಸ್‌ಗಳನ್ನೇ ಬಳಕೆ ಮಾಡಿಕೊಂಡಿರುವುದರಿಂದ ಸರಕಾರಿ ಬಸ್‌ ಸೇವೆ ಜನಸಾಮಾನ್ಯರಿಗೆ ಯಥಾಪ್ರಕಾರ ಸಿಗಲಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.

Scroll to Top