ಬೆಂಗಳೂರು : ಅಬ್ಬಾ.. ಸಾಕಪ್ಪಾ ಸಾಕು ಅನ್ನೋ ಬೇಸಿಗೆಯ ಬಿಸಿ ಮತ್ತೆ ಏರಿಕೆಯಾಗುತ್ತಿದೆ. ಗರಿಷ್ಠ ತಾಪಮಾನ ಸಹಿಸಿಕೊಳ್ಳಲಾಗದೇ ಪರದಾಡುತ್ತಿರುವ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಇಂದಿನಿಂದ ಅಂದ್ರೆ ಏಪ್ರಿಲ್ 25ರಿಂದ ಮುಂದಿನ 5 ದಿನಗಳವರೆಗೆ ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ.
ನಾಳೆ ದೇಶದ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ನಾಳೆ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
ನಾಳೆ ಕೇರಳ, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿನ ಉಷ್ಣಾಂಶ ಇರುವ ಮುನ್ಸೂಚನೆ ನೀಡಲಾಗಿದೆ. ಕೇರಳ ರಾಜ್ಯದಲ್ಲಿ 36-40 ಡಿಗ್ರಿ ಉಷ್ಣಾಂಶ ದಾಖಲಾಗುವ ಮುನ್ಸೂಚನೆ ಇದೆ. ಚುನಾವಣಾ ಆಯೋಗವು ಬಿಸಿ ಗಾಳಿ ಸಮಸ್ಯೆ ಎದುರಿಸಲು ಟಾಸ್ಕ್ ಪೋರ್ಸ್ ರಚಿಸಿದೆ. ಪೋಲಿಂಗ್ ಬೂತ್‌ಗಳಲ್ಲಿ ಕುಡಿಯುವ ನೀರು, ಫ್ಯಾನ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ.
ಏಪ್ರಿಲ್ 25ರಿಂದ ಏಪ್ರಿಲ್ 29ರವರೆಗೆ ಬಿಸಿಗಾಳಿ, ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.