ಉಡುಪಿ/ದ.ಕ: ಏ.30 ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ

ಕರಾವಳಿಯಲ್ಲಿ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎ.30 ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ದ.ಕ, ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.

ಬಿಸಿಗಾಳಿಯಿಂದಾಗಿ ಉಂಟಾಗುವ ಸನ್ ಸ್ಟೋಕ್ ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಮಧ್ಯಾಹ್ನ 1 ರಿಂದ ಅಪರಾಹ್ನ 3 ರವರೆಗೆ ಹೊರಗೆ ಹೋಗಬಾರದು, ತೆಳುವಾದ, ಹಗುರವಾದ ಬಟ್ಟೆಗಳನ್ನು ಧರಿಸಬೇಕು, ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಎಂದು ಸೂಚನೆ ನೀಡಿದೆ.

ದ.ಕ ಜಿಲ್ಲೆಯ ಗರಿಷ್ಠ ತಾಪಮಾನ ಸದ್ಯಕ್ಕೆ ಸ್ಥಿರವಾಗಿದೆ. ಗುರುವಾರ ಈ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಶುಕ್ರವಾರ ಗರಿಷ್ಠ 34.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜಿಲ್ಲೆಯ ಬಹುತೇಕ ಗಡಿ ಭಾಗಗಳಲ್ಲಿ ಸಂಜೆಯಿಂದ ಮೋಡದ ವಾತಾವರಣದ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

Scroll to Top