ಶೌಚಾಲಯದಿಂದ ತಡವಾಗಿ ಬಂದಿದ್ದಕ್ಕೆ ತಮ್ಮನ ಕೊಲೆಗೈದ ಅಣ್ಣ!

ಶೌಚಾಲಯದಿಂದ ತಡವಾಗಿ ಹೊರ ಬಂದಿದ್ದಕ್ಕೆ ಕೋಪಗೊಂಡ ಅಣ್ಣ ತನ್ನ ಒಡಹುಟ್ಟಿದ ತಮ್ಮನನ್ನೇ ಕೊಂದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ವೃತ್ತಿಯಲ್ಲಿ ಪೇಂಟರ್ ಆಗಿರುವ ಅಬ್ದುಲ್ ಹಮೀದ್ ಕೊಲೆಯಾಗಿದ್ದು, ಆತನ ಅಣ್ಣ ಕೂಲಿ ಕೆಲಸಗಾರ ಮಾಜಿದ್ ಕೊಲೆ ಆರೋಪಿ.

ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಮಾಜಿದ್ ಮತ್ತು ಹಮೀದ್ ಕುಟುಂಬ ಸಮೇತ ವಾಸಿಸುತ್ತಿದ್ದರು. ಶೌಚಾಲಯಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಬುಧವಾರ ಶೌಚಾಲಯ ಬಳಸಿದ ಕಿರಿಯ ಸಹೋದರ ಹಮೀದ್ ಎಷ್ಟೊತ್ತಾದರೂ ಶೌಚಾಲಯದಿಂದ ಹೊರ ಬಾರದ್ದಕ್ಕೆ ಶೌಚಾಲಯಕ್ಕೆ ಹೋಗಲು ಹೊರ ಭಾಗದಲ್ಲಿ ಕಾಯುತ್ತಿದ್ದ ಅಣ್ಣ ಮಾಜಿದ್ ಆಕ್ರೋಶಗೊಂಡಿದ್ದಾನೆ.

ಬಳಿಕ ತಡವಾಗಿ ಶೌಚಾಲಯದಿಂದ ಹೊರ ಬಂದ ಅಬ್ದುಲ್‌ ಹಮೀದ್‌ನೊಂದಿಗೆ ವಾಗ್ವಾದ ನಡೆಸಿದ್ದಾನೆ. ವಾಗ್ವಾದವು ತಾರಕಕ್ಕೇರಿ ಹಮೀದ್‌ನ ಕೊಲೆಯಲ್ಲಿ ಅಂತ್ಯವಾಗಿದೆ. ಮಜೀದ್ ಹಮೀದ್‌ನ ತಲೆಗೆ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಹಮೀದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಗಲಾಟೆ ವೇಳೆ ಮಧ್ಯ ಪ್ರವೇಶಿಸಿದ ಹಮೀದ್ ಪತ್ನಿಯನ್ನು ಆರೋಪಿ ಮೇಲಿನ ಮಹಡಿಯಿಂದ ಕೆಳಕ್ಕೆ ಎಸೆದಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇಂದೋರ್ ಜಿಲ್ಲಾ ಪೊಲೀಸರು ಆರೋಪಿ ಮಾಜೀದ್‌ನನ್ನು ಬಂಧಿಸಿದ್ದಾರೆ.

You cannot copy content from Baravanige News

Scroll to Top