ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್ ಮುಂದೆ ಒಪ್ಪಿಕೊಂಡಿದೆ. ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಲಂಡನ್ ಕೋರ್ಟ್ನಲ್ಲಿ ಹೇಳಿದೆ. ಈ ಬೆನ್ನಲ್ಲೇ, ಭಾರತದಲ್ಲಿ ಹೆಣ್ಮಕ್ಕಳನ್ನು ಕಳೆದುಕೊಂಡ ಇಬ್ಬರು ಪೋಷಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕೊರೊನಾ ಅವಧಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡ ನಂತರ ಸಾವನ್ನಪ್ಪಿದ ಭಾರತದ ಇಬ್ಬರು ಹೆಣ್ಮಕ್ಕಳ ಪೋಷಕರು ಕಾನೂನು ಹೋರಾಟ ಮಾಡೋದಾಗಿ ಹೇಳಿದ್ದಾರೆ. ಕೋವಿಶೀಲ್ಡ್ ಲಸಿಕೆಯನ್ನು ಒದಗಿಸಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ವಿರುದ್ಧ ಕೇಸ್ ದಾಖಲಿಸೋದಾಗಿ ತಿಳಿಸಿದ್ದಾರೆ.
ರಿತಿಕಾ (18), ಕಾರುಣ್ಯ (20) ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ ಮೇಲೆ ಸಾವನ್ನಪ್ಪಿದ್ದರು. ಕಾರುಣ್ಯ 2021, ಜುಲೈನಲ್ಲಿ ಸಾವನ್ನಪ್ಪಿದ್ದರು. ಅವರ ತಂದೆ ವೇಣುಗೋಪಾಲನ್ ಗೋವಿಂದನ್, ನನ್ನ ಮಗಳು ಕಾರುಣ್ಯ ಲಸಿಕೆ ಪಡೆದು ಒಂದು ತಿಂಗಳ ನಂತರ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ಅಸ್ಟ್ರಾಝೆನೆಕಾ ಮತ್ತು ಆಕ್ಸ್ಪರ್ಢ್ ವಿಶ್ವವಿದ್ಯಾಲಯವು ಕಂಡು ಹಿಡಿದಿದ್ದ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿ ವಿತರಣೆ ಮಾಡಿದ್ದ ಸೀರಮ್ ವಿರುದ್ಧ ಕೇಸ್ ದಾಖಲಿಸೋದಾಗಿ ಹೇಳಿದ್ದಾರೆ.
ರಿತಿಕಾ ಕೂಡ ಲಸಿಕೆ ಪಡೆದು ಎರಡು ವಾರಗಳ ಅವಧಿಯಲ್ಲೇ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ರಚನಾ ಗಂಗು ಹೇಳಿದ್ದಾರೆ. ಈ ಹಿಂದೆಯೂ ಕೂಡ ಲಸಿಕೆ ಪಡೆದ ನಂತರ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಔಷಧಿಗಳ ತಯಾರಿಕ ಸಂಸ್ಥೆ ಸೀರಮ್ ವಿರುದ್ಧ ಕೇಸ್ ದಾಖಲಿಸಿರಲಿಲ್ಲ. ಲಸಿಕೆ ಪಡೆಯೋದ್ರಿಂದ ಯಾವುದೇ ಹಾನಿಯಾಗಲ್ಲ ಎಂದು ಸರ್ಕಾರದ ತಜ್ಞರ ಸಮಿತಿ ಹೇಳಿದ್ದರು. ಹೀಗಾಗಿ ಸರ್ಕಾರದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದ್ದರು.