4 ತಿಂಗಳ ಒಳಗಡೆ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿ: ಹೈಕೋರ್ಟ್‌

ಬೆಂಗಳೂರು : ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು 4 ತಿಂಗಳ ಒಳಗಡೆ ಪೂರ್ಣಗೊಳಿಸುವಂತೆ ಉಡುಪಿ ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ಪರಶುರಾಮ ಪ್ರತಿಮೆ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ.ಮೂ.ಎಂ.ನಾಗಪ್ರಸನ್ನ ಆದೇಶ ಪ್ರಕಟಿಸಿದ್ದಾರೆ.

ಬಾಕಿ ಕೆಲಸ ಪೂರ್ಣಗೊಳಿಸುವುದಕ್ಕೆ ಸೂಕ್ತ ಭದ್ರತೆ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಿಕೊಡಿ‌ ಎಂದು ಕೃಷ್ಣ ನಾಯ್ಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಪ್ರಕಟಗೊಂಡ ನಾಲ್ಕು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದೆ.

ಏನಿದು ಪ್ರಕರಣ..!?

ಕಾರ್ಕಳ ಮಾಜಿ ಸಚಿವ, ಹಾಲಿ ಶಾಸಕ ಸುನೀಲ್‌ ಕುಮಾರ್‌ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದರು. ಕಾಮಗಾರಿ ಪೂರ್ಣಗೊಳ್ಳದೇ ಈ ಥೀಮ್‌ ಪಾರ್ಕ್‌ ಉದ್ಘಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗ ಸಿಐಡಿ ತನಿಖೆಗೆ ಆದೇಶಿಸಿದ್ದರು.

ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದರು. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ತನಿಖೆಗೆ ಆದೇಶ ನೀಡಿದ್ದರು.

Scroll to Top