ಬೆಂಗಳೂರು : ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಕಳೆದ ಎರಡು ದಿನಗಳಿಂದ ಎಸ್ಐಟಿ ಅಧಿಕಾರಿಗಳು ಹುಟುಕಾಟ ನಡೆಸಿದ್ದರು. ನಿನ್ನೆ ರಾತ್ರಿ ಕೇವಲ ಅರ್ಧ ಗಂಟೆಯಲ್ಲಿ 3 ಕಾರುಗಳಲ್ಲಿ ರೇವಣ್ಣ ಪರಾರಿಯಾಗಿದ್ದರು. ಅಲ್ಲಿಂದ ಪರಾರಿಯಾದವರು ಎಲ್ಲಿದ್ದಾರೆ ಎಂಬುದು ಸಣ್ಣ ಕ್ಲೂ ಕೂಡ ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ಹುಣಸೂರಿನ ಕಾಳೇನಹಳ್ಳಿಯ ಸುತ್ತಮುತ್ತ ಚೇಜ್ ಮಾಡಿದರು ಅವರು ಸಿಕ್ಕಿಲ್ಲ. ಬಳಿಕ ಮಧ್ಯರಾತ್ರಿ 2 ಗಂಟೆಗೆ ರಾಮನಗರ ಬಳಿ ಇದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು.
ರೇವಣ್ಣ ಅವರು ಕಿಡ್ನಾಪ್ ಆಗಿರುವ ಮಹಿಳೆ ಸಮೇತ ಕಾರಿನಲ್ಲಿ ಒಡಾಟ ನಡೆಸುತ್ತಿದ್ದರು. ಎಸ್ಐಟಿ ಅಧಿಕಾರಿಗಳು ಬೆನ್ನು ಬಿದ್ದಿರೋದು ಗೊತ್ತಾಗುತ್ತಿದ್ದಂತೆ ಮಹಿಳೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದರು. ಬಳಿಕವೇ ಸಂತ್ರಸ್ತೆ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಹುಣಸೂರಿನಿಂದ ಮಹಿಳೆಯ ಕರೆತಂದು ಸ್ಥಳ ಮಹಜರು ಮಾಡಿದ್ದರು.
ಸದ್ಯ ಈ ಎಲ್ಲದರ ಮಧ್ಯೆ ಇದೀಗ ರೇವಣ್ಣ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಇದ್ದರು. ಇದನ್ನು ತಿಳಿದುಕೊಂಡ ಅಧಿಕಾರಿಗಳು ದೇವೇಗೌಡರ ನಿವಾಸಕ್ಕೆ ತೆರಳಿ ರೇವಣ್ಣರನ್ನು ಅರೆಸ್ಟ್ ಮಾಡಿದ್ದಾರೆ.