ಹೆಬ್ರಿ : ಕರಾವಳಿ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆಯ ಬಳಿ ಬಿರುಕು ಕಂಡಿದ್ದು ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ಹಾಗೂ ಘಾಟಿ ಆರಂಭದ ಮಧ್ಯೆ ಘನ ವಾಹನಗಳು ರಸ್ತೆಯ ಬದಿಯಲ್ಲಿ ಸಂಚರಿಸಿದರೆ ಸಂಪೂರ್ಣ ಕುಸಿಯುವ ಸ್ಥಿತಿ ಇದೆ. ಪ್ರಸ್ತುತ ಈ ಕಿರಿದಾದ ಘಾಟಿಯಲ್ಲಿ ಹಲವಾರು ಘನವಾಹನಗಳು ಸಂಚರಿಸುತ್ತಿವೆ. ಈ ಹಿಂದೆ ಕೆಲವೆಡೆ ಘನ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆಗಳಿಗೆ ಹಾನಿಯಾಗಿತ್ತು. ಇದೀಗ ಘಾಟಿ ಆರಂಭದಲ್ಲಿ ರಸ್ತೆ ತೀರಾ ಕಿರಿದಾಗಿದ್ದು, ಒಂದು ವಾಹನ ಸಂಚರಿಸುವುದೂ ಕಷ್ಟ ಎಂಬಂತಿದೆ. ಇಂತಹ ಸಂದರ್ಭದಲ್ಲಿ ಘನವಾಹನಗಳ ಸಂಚಾರದಿಂದ ಸಮಸ್ಯೆ ಬಿಗಡಾಯಿಸಬಹುದು ಎಂಬುದು ಸಾರ್ವಜನಿಕರ ಆತಂಕವಾಗಿದೆ.
ಶಾಲೆಗಳಿಗೆ ರಜೆ ಇರುವ ಕಾರಣ ಪ್ರವಾಸಿಗರ ವಾಹನಗಳ ದಟ್ಟಣೆ ಘಾಟಿಯಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಘನ ವಾಹನಗಳ ಓಡಾಟದಿಂದ ರಸ್ತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಬಿರುಕುಬಿಟ್ಟ ತಡೆಗೋಡೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಮಳೆಗಾಲದಲ್ಲಿ ಮಳೆ ನೀರು ನುಗ್ಗಿ ತಡೆಗೋಡೆಗೆ ಭಾರೀ ಹಾನಿಯುಂಟಾಗಬಹುದು ಎಂಬ ಆತಂಕ ಎದುರಾಗಿದೆ.
ಪ್ರತೀ ವರ್ಷ ಘಾಟಿಯ ಕೆಲವು ತಿರುವು ಗಳಲ್ಲಿ ಕುಸಿತ ಕಂಡುಬರುತ್ತಿದ್ದು ಕೆಲವು ಬಾರಿ ಮಳೆಗಾಲದಲ್ಲಿ ಘಾಟಿ ಸಂಚಾರ ಬಂದ್ ಆಗಿತ್ತು. ಮಳೆಗಾಲದ ಮೊದಲೇ ಕುಸಿತಗೊಂಡ ತಡೆಗೋಡೆ ಗಳನ್ನು ದುರಸ್ತಿ ಮಾಡದಿರುವುದೂ ಇದಕ್ಕೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಲಿನ ಜಿಲ್ಲೆಯ ಜನರು ಮಣಿಪಾಲ ಆಸ್ಪತ್ರೆಯನ್ನು ಆಶ್ರಯಿಸಿದ್ದು, ಅವರಿಗೆ ಈ ಮಾರ್ಗ ಬಹಳ ಪ್ರಮುಖವಾದುದು. ಒಂದು ವೇಳೆ ಸಂಚಾರಕ್ಕೆ ಸಮಸ್ಯೆಯಾದರೆ ಇವರಿಗಷ್ಟೇ ಅಲ್ಲದೇ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯೊಂದಿಗೆ ಕರಾವಳಿಯ ಸಂಪರ್ಕವೂ ಕಡಿತಗೊಳ್ಳಲಿದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಘನವಾಹನಗಳ ಸಂಚಾರವನ್ನು ನಿರ್ಬಂಧಿಸಿ ಕುಸಿತಗೊಂಡ ತಡೆಗೋಡೆಯನ್ನ ಸರಿಪಡಿಸಬೇಕು ಹಾಗೂ ಅಲ್ಲಿಯವರೆಗೆ ಭದ್ರತೆ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರತೀ ತಿರುವುಗಳಲ್ಲಿ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಉಳಿದ ವಾಹನ ಸಂಚಾರಕ್ಕೂ ಕಷ್ಟವಾಗುತ್ತಿದೆ. ಇದರೊಂದಿಗೆ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇರದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನೂ ಆದಷ್ಟು ಬೇಗ ಸರಿಪಡಿಸಬೇಕಿದೆ.