ಈ ಬಾರಿ ಜಿಲ್ಲೆಯ ನಗರ ಪ್ರದೇಶದ ಜೊತೆಗೆ ಗ್ರಾಮೀಣ ಪ್ರದೇಶದಲ್ಲೂ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವನ್ಯಜೀವಿಗಳು ಕೂಡ ಕುಡಿಯಲು ನೀರಿಲ್ಲದೆ ಹಾಹಾಕಾರ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸಿದ್ದಾಪುರ ವನ್ಯಜೀವಿ ವಿಭಾಗದ ಅಧಿಕಾರಿಗಳ ಮುಂದಾಲೋಚನೆ ಈ ಬಾರಿ ವನ್ಯಜೀವಿಗಳಿಗೆ ನೀರುಣಿಸುವಂತೆ ಮಾಡುತ್ತಿದೆ. ಹಾಗಾದ್ರೆ ಏನಿದು ಮುಂದಾಲೋಚನೆ ಅಂತಿರಾ ಈ ಸ್ಟೋರಿ ನೋಡಿ…
ಹೌದು ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಜಲಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತ ಹಿಂದೆ ಬಿದ್ದಿರುವುದು ಮತ್ತು ಸಾಕಷ್ಟು ಮುಂಜಾಗ್ರತೆಯ ಕೊರತೆ ಈ ಕುಡಿಯುವ ನೀರಿನ ಬವಣೆಗೆ ಕಾರಣವಾಗಿದೆ ಎನ್ನಬಹುದು. ಸದ್ಯ ನಗರ ಪ್ರದೇಶದಲ್ಲಿ ಇರುವ ನೀರನ್ನು ಉಳಿಸಿ ಮಳೆಗಾಲದ ಆರಂಭದವರೆಗೆ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿರುವ ಜನರು ಹತ್ತಿರದಲ್ಲಿರುವ ಜಲಮೂಲಗಳನ್ನೇ ಅರಸಿಕೊಂಡು ಹೋಗಿ ನೀರಿನ ಬವಣಿಯನ್ನು ತೀರಿಸಿಕೊಳ್ಳುತ್ತಿದ್ದಾರೆ.
ಇಲ್ಲಿ ನೀರಿನ ಸಮಸ್ಯೆ ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ತಟ್ಟಿದೆ ಎಂದರೆ ನೀವು ನಂಬಲೇಬೇಕು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಸಿದ್ದಾಪುರ ವನ್ಯಜೀವಿ ವಿಭಾಗದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವ ಪರಿಸ್ಥಿತಿ ಎದುರಾಗಿತ್ತು. ಅಧಿಕಾರಿಗಳ ದೂರದೃಷ್ಟಿಯಿಂದ ಈ ಬಾರಿ ಕಾಡುಪ್ರಾಣಿಗಳಿಗೂ ಕೂಡ ಸೂಕ್ತ ನೀರಿನ ವ್ಯವಸ್ಥೆಯಾಗುತ್ತಿದೆ ಎಂದರೆ ನೀವು ನಂಬಲೇಬೇಕು…
ಸಿದ್ದಾಪುರ ವನ್ಯಜೀವಿ ವಿಭಾಗದ ಸಂತೋಷ್ ಪವಾರ್ ಮತ್ತು ತಂಡ ಕಳೆದ ಬಾರಿ ಕಾಡುಪ್ರಾಣಿಗಳಿಗೆ ಆಗಿರುವ ಸಮಸ್ಯೆಯನ್ನು ಗಮನದಲ್ಲಿರಿಸಿ ಈ ಬಾರಿ ಅಂತಹ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದಾರೆ. ಕಾಡಿನ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ದಾಟಿ ಕಾಡುಪ್ರಾಣಿಗಳು ನೀರು ಕುಡಿಯಲು ಹೋಗಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಸಾಕಷ್ಟು ಅಪಘಾತಗಳು ಕೂಡ ಸಂಭವಿಸ್ತಿದ್ದವು.
ಹೀಗಾಗಿ ಆಯಕಟ್ಟಿನ ಜಾಗಗಳಲ್ಲಿ ನೀರಿನ ಟ್ಯಾಂಕ್ ಗಳನ್ನ ಮಾಡುವ ಮೂಲಕ ಕಾಡು ಪ್ರಾಣಿಗಳಿಗೂ ಕೂಡ ನೀರು ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಿದ್ದಾಪುರ ವನ್ಯಜೀವಿ ವಿಭಾಗದ ಸುಮಾರು 15 ಕಡೆಗಳಲ್ಲಿ ಇಂತಹ ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದ್ದು ಎರಡು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯವು ನಡೆಯುತ್ತಿದೆ.
ಈ ವ್ಯಾಪ್ತಿಯಲ್ಲಿ ಚಿರತೆ,ಕಾಡುಕೋಣ, ಕಾಡು ಹಂದಿ, ಕಡವೆ, ಜಿಂಕೆ, ಮುಳ್ಳುಹಂದಿ, ನವಿಲು, ಮಂಗ ಮುಂತಾದ ಪ್ರಾಣಿ ಪಕ್ಷಿಗಳು ಕೂಡ ವನ್ಯಜೀವಿ ವಿಭಾಗ ನಿರ್ಮಿಸಿದ ತೊಟ್ಟಿಯ ನೀರನ್ನೆ ಈ ಬಾರಿ ಆಶ್ರಯಿಸಿವೆ. ಇಲಾಖೆ ಈ ತೊಟ್ಟಿಗಳನ್ನು ಯಾವ ಯಾವ ಪ್ರಾಣಿಗಳು ನೀರಿಗಾಗಿ ಬಳಸುತ್ತವೆ ಎನ್ನುವುದನ್ನು ಕೂಡ ಟ್ರ್ಯಾಕ್ ಕ್ಯಾಮಾರದ ಮೂಲಕ ಸೆರೆ ಹಿಡಿಯುವ ಪ್ರಯತ್ನವನ್ನ ಮಾಡಿದೆ. ಈ ಮಾಹಿತಿಯನ್ನೇ ಆಧರಿಸಿ ಮುಂದಿನ ದಿನಗಳಲ್ಲಿ ಪ್ರಾಣಿಗಳ ಗಣತಿಯಂತೆ ಇನ್ನಷ್ಟು ಹೆಚ್ಚಿನ ತೊಟ್ಟಿಗಳನ್ನು ನಿರ್ಮಾಣ ಮಾಡುವ ಯೋಜನೆ ಇಲಾಖೆಯದ್ದು ಎನ್ನುತ್ತಾರೆ ವನ್ಯಜೀವಿ ಅಧಿಕಾರಿ ಸಂತೋಷ್ ಪವಾರ್.